ಸೋಮವಾರಪೇಟೆ, ಏ.೩: ತಾಲೂಕು ಕೇಂದ್ರ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ೨೧ ಹಾಸಿಗೆಯ ಐ.ಸಿ.ಯು. ಹಾಗೂ ೫ ಹಾಸಿಗೆಯ ಡಯಾಲಿಸಿಸ್ ಕೇಂದ್ರ ಸಿದ್ಧವಾಗುತ್ತಿದ್ದು ಸದ್ಯದಲ್ಲೇ ಕಾರ್ಯಾರಂಭವಾಗಲಿದೆ ಎಂದು ಶಾಸಕ ಎಂ.ಪಿ. ಅಪಚ್ಚುರಂಜನ್ ಹೇಳಿದರು.
೧೩೧ ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿ ಯೋಜನೆಯನ್ನು ಪರಿಶೀಲಿಸಿ ಮಾತನಾಡಿದ ಶಾಸಕರು,ಕೋವಿಡ್ ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆಸ್ಪತ್ರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಆ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯಲ್ಲಿ ೨೧ ಹಾಸಿಗೆಯ ಐ.ಸಿ.ಯು. ಸಿದ್ಧಗೊಳ್ಳುತ್ತಿದ್ದು ಇಂಕ್ಯೂಬೆಟರ್ ಸಹಿತ ಎಲ್ಲಾ ಚಿಕಿತ್ಸೆ ಲಭ್ಯವಾಗಲಿದೆ ಎಂದರು.
ಈ ಹಿಂದೆ ಇದ್ದ ೩ ಹಾಸಿಗೆಯ ಡಯಾಲಿಸಿಸ್ ಘಟಕವನ್ನು ೫ ಹಾಸಿಗೆಗೆ ಹೆಚ್ಚಿಸಲಾಗುತ್ತಿದೆ ಎಂದ ಅವರು, ಈ ಎಲ್ಲಾ ಚಿಕಿತ್ಸೆಗಳಿಗೂ ತಜ್ಞ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸತೀಶ್ ಮಾತನಾಡಿ ಐ.ಸಿ.ಯು. ನಿರ್ಮಾಣವಾಗುತ್ತಿರುವುದರಿಂದಾಗಿ ತುರ್ತು ಹಾಗೂ ಗಂಭೀರ ಕಾಯಿಲೆಗಳಿಗೂ ಇಲ್ಲಿ ಚಿಕಿತ್ಸೆ ನೀಡಬಹುದೆಂದರು. ಮೇಲ್ಭಾಗದಲ್ಲಿದ್ದ ಪುರುಷರ ವಾರ್ಡನ್ನು ಸ್ಥಳಾಂತರಿಸಿ ಐ.ಸಿ.ಯು. ಸಿದ್ಧಗೊಳಿಸಲಾಗುತ್ತಿದೆ. ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗುತ್ತಿದ.
ಐದು ಬೆಡ್ ಗಳಲ್ಲಿ ೨೫ ಮಂದಿಗೆ ಡಯಾಲಿಸಿಸ್ ಮಾಡಲಾಗುತ್ತಿದ್ದು, ಎಲ್ಲಾ ರೋಗಿಗಳಿಗೂ ಚಿಕಿತ್ಸೆ ದೊರಕುತ್ತಿದೆ ಎಂದು ಮಾಹಿತಿ ನೀಡಿದರು.