ಸಿದ್ದಾಪುರ, ಏ ೩: ಸಿದ್ದಾಪುರದ ರೆಸಾರ್ಟ್ವೊಂದರಲ್ಲಿ ಮಂಗಳೂರಿನ ಶಾಸಕರೊಬ್ಬರ ಸಹೋದರನ ರೂ ೭ ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ಮಂಗಳೂರಿನ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಸಹೋದರರಾದ ಮುಂಬಯಿಯ ಉದ್ಯಮಿ ಬಾಲಕೃಷ್ಣ ಭಂಡಾರಿ ಸಿದ್ದಾಪುರದ ರೆಸಾರ್ಟ್ವೊಂದರಲ್ಲಿ ಶುಕ್ರವಾರದಂದು ತಂಗಿದ್ದರು. ಶನಿವಾರದಂದು ರೆಸಾರ್ಟ್ನ ಕೊಠಡಿಯಲ್ಲಿಟ್ಟಿದ್ದ ಬೆಲೆಬಾಳುವ ಚಿನ್ನಾಭರಣ, ನಗದು, ಮೊಬೈಲ್, ವಜ್ರದ ಉಂಗುರಗಳು ಕಾಣೆಯಾಗಿದೆ ಎನ್ನಲಾಗಿದೆ.

ಈ ಕುರಿತು ಬಾಲಕೃಷ್ಣ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು,ರೂ ೭ ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸುತ್ತಲೂ ಸಿಸಿ ಕ್ಯಾಮೆರ ಅಳವಡಿಸಿದ್ದರೂ ಕೂಡ ಕಳ್ಳತನವಾಗಿರುವುದು ಕುತೂಹಲಕ್ಕೆ ಎಡೆಮಾಡಿದೆ.ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ರೆಸಾರ್ಟ್ನಲ್ಲಿ ಈ ಹಿಂದೆಯೂ ಕೂಡ ಕಳ್ಳತನ ಪ್ರಕರಣ ದಾಖಲಾಗಿದ್ದರೂ ಸಹ ಅಪರಾಧಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇದೀಗ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.