ಸೋಮವಾರಪೇಟೆ, ಮಾ.೩೧: ಕುಶಾಲನಗರ ತಾಲೂಕಿನ ಮದಲಾಪುರ ಸಮೀಪದ ಜೇನುಕಲ್ಲು ಬೆಟ್ಟದ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೆೆÃಟೆಯಾಡಿ ಮಾಂಸ ಸಾಗಾಟ ಮಾಡುತ್ತಿದ್ದ ಸಂದರ್ಭ ಅರಣ್ಯ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಈರ್ವರನ್ನು ವಶಕ್ಕೆ ಪಡೆದಿದ್ದು, ನಾಲ್ವರು ಬೇಟೆಗಾರರು ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ.
ನಿನ್ನೆ ರಾತ್ರಿ ಮೀಸಲು ಅರಣ್ಯ ವ್ಯಾಪ್ತಿಯ ಜೇನುಕಲ್ಲು ಬೆಟ್ಟ ಪ್ರದೇಶದಲ್ಲಿ ಒಂದು ಜಿಂಕೆಯನ್ನು ಕೊಂದು ಮಾಂಸವನ್ನಾಗಿಸಿ ಇಂದು ಬೆಳಿಗ್ಗೆ ವಾಪಸ್ಸಾಗುತ್ತಿದ್ದ ಯಲಕನೂರು ಹೊಸಳ್ಳಿ ಗ್ರಾಮದ ಕಾವೇರಪ್ಪ, ಹರೀಶ ಅವರುಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ಸಂದರ್ಭ
(ಮೊದಲ ಪುಟದಿಂದ) ಆಟೋದೊಳಗಿದ್ದ ಇತರ ನಾಲ್ವರು ಆರೋಪಿಗಳಾದ ಹೊಸಳ್ಳಿ ಗ್ರಾಮದ ಪ್ರವೀಣ್, ಕೃಷ್ಣಪ್ಪ ಅಲಿಯಾಸ್ ಪಾಪು, ಪ್ರೇಮ್‌ನಾಥ್ ಅಲಿಯಾಸ್ ಪ್ರೀತು ಮತ್ತು ಮೋನಿಶ್ ಅವರುಗಳು ಓಡಿ ಪರಾರಿಯಾಗಿದ್ದಾರೆ.
ನಿನ್ನೆ ರಾತ್ರಿ ಹರೀಶ್‌ಗೆ ಸೇರಿದ ಆಟೋದಲ್ಲಿ ಮೂರು ಕೋವಿಗಳೊಂದಿಗೆ ಜೇನುಕಲ್ಲು ಬೆಟ್ಟ ಪ್ರವೇಶಿಸಿರುವ ಆರೋಪಿಗಳು, ಒಂದು ಜಿಂಕೆಯನ್ನು ಹತ್ಯೆಗೈದಿದ್ದು, ನಂತರ ಅದರ ಚರ್ಮ ಸುಲಿದು ಮಾಂಸವನ್ನಾಗಿ ಪರಿವರ್ತಿಸಿ ಇಂದು ಬೆಳಿಗ್ಗೆ ಯಲಕನೂರು ಹೊಸಳ್ಳಿಗೆ ಆಗಮಿಸುತ್ತಿದ್ದರು.
ಈ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಸೋಮವಾರಪೇಟೆ ಎಸಿಎಫ್ ಸಿ.ಡಿ. ನೆಹರು ಹಾಗೂ ಆರ್‌ಎಫ್‌ಓ ಶಮಾ ಅವರುಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಸೋಮವಾರಪೇಟೆ ಅರಣ್ಯ ಇಲಾಖಾ ಅಧಿಕಾರಿ ಹಾಗೂ ಸಿಬ್ಬಂದಿಗಳು, ಕೃತ್ಯಕ್ಕೆ ಬಳಸಿದ ಆಟೋ, ಮೂರು ಬಂದೂಕು, ೧೦ ಕೆ.ಜಿ. ಜಿಂಕೆ ಮಾಂಸ, ತಲೆ, ಚರ್ಮ ಸಹಿತ ಈರ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆ ಸಂದರ್ಭ ನಾಲ್ವರು ಆರೋಪಿಗಳು ಆಟೋದಿಂದ ಜಿಗಿದು ಪರಾರಿಯಾಗಿದ್ದು, ಅರಣ್ಯ ಇಲಾಖಾ ಸಿಬ್ಬಂದಿಗಳು ಬೆನ್ನಟ್ಟಿದರೂ ಸಿಕ್ಕಿಹಾಕಿಕೊಳ್ಳದೇ ತಲೆಮರೆಸಿ ಕೊಂಡಿದ್ದಾರೆ. ಒಟ್ಟು ಆರು ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದ್ದು, ವಶಕ್ಕೆ ಪಡೆದ ಈರ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿಗಳಾದ ಭರತ್, ಮನು, ರಕ್ಷಕರಾದ ರಾಜಣ್ಣ, ಭೀಮಣ್ಣ, ಲೋಕೇಶ, ವೀಕ್ಷಕರುಗಳಾದ ದಿವಾಕರ್, ರಾಜಪ್ಪ, ರಕ್ಷಿತ್,
ದೀಕ್ಷಿತ್, ಹರ್ಷಿತ್ ಅವರುಗಳು ಭಾಗವಹಿಸಿದ್ದರು.