ಮಡಿಕೇರಿ, ಮಾ. ೩೧: ದೇಶಕಂಡ ಅಪ್ರತಿಮ ಸೇನಾನಿ, ವಿಶ್ವ ಖ್ಯಾತಿಯ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ೧೧೬ನೇ ಜನ್ಮದಿನಾಚರಣೆಯನ್ನು ಇಂದು ಜಿಲ್ಲೆಯೂ ಸೇರಿದಂತೆ ಹಲವೆಡೆ ಆಚರಿಸಲಾಯಿತು. ಸರಳ ಕಾರ್ಯಕ್ರಮವಾದರೂ ಸೇನಾನಿಗೆ ಪುಷ್ಪಾಂಜಲಿಯ ಮೂಲಕ ನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.

ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಸ್ಮಾರಕಭವನ (ಸನ್ನಿಸೈಡ್) ಆವರಣದಲ್ಲಿನ ಯುದ್ಧ ಸ್ಮಾರಕದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಪ್ರಮುಖರು ಗೌರವ ಸಲ್ಲಿಸಿದರು. ಬಳಿಕ ಮ್ಯೂಸಿಯಂ ಒಳಗೆ ಇರಿಸಿದ್ದ ತಿಮ್ಮಯ್ಯ ಅವರ ಭಾವಚಿತ್ರಕ್ಕೂ ಪುಷ್ಪ ನಮನ ಸಲ್ಲಿಸಲಾಯಿತು.

ಗೋಣಿಕೊಪ್ಪಲುವಿನಲ್ಲಿರುವ ಫಿ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಪ್ರತಿಮೆ ಸ್ಥಳದಲ್ಲಿ ಕಾವೇರಿ ಪದವಿ ಹಾಗೂ ಪದವಿಪೂರ್ವ ಕಾಲೇಜು, ಕಾವೇರಿ ವಿದ್ಯಾಸಂಸ್ಥೆ ಮೂಲಕ ಸರಳ ಕಾರ್ಯಕ್ರಮದಲ್ಲಿ ಗೌರವಾರ್ಪಣೆ ಮಾಡಲಾಯಿತು.

ರಾಜಧಾನಿ ಬೆಂಗಳೂರಿನಲ್ಲಿರುವ ಜನರಲ್ ತಿಮ್ಮಯ್ಯ ಅವರ ಸಮಾಧಿ ಸ್ಥಳ ಇರುವ ಎ.ಎಸ್.ಸಿ. ಸೆಂಟರ್‌ನಲ್ಲಿ ಎ.ಎಸ್.ಸಿ. ಸೆಂಟರ್ ಹಾಗೂ ಬೆಂಗಳೂರು ಕೊಡವ ಸಮಾಜದ ಸಹಭಾಗಿತ್ವದಲ್ಲಿ ವರ್ಷಂಪ್ರತಿಯAತೆ ಸಮಾಧಿ ಹಾಗೂ ಪ್ರತಿಮೆಗೆ ಪುಷ್ಪಗುಚ್ಚವಿರಿಸಿ ನಮನ ಸಲ್ಲಿಸಲಾಯಿತು. ಮೈಸೂರಿನಲ್ಲಿಯೂ ಮೈಸೂರು ಕೊಡವ ಸಮಾಜದಿಂದ ಕಾರ್ಯಕ್ರಮ ಜರುಗಿತು.ಬೆಂಗಳೂರು : ಬೆಂಗಳೂರಿನ ಎ.ಎಸ್.ಸಿ. ಸೆಂಟರ್‌ನಲ್ಲಿ ಎ.ಎಸ್.ಸಿ. ಸೆಂಟರ್ ಹಾಗೂ ಕಾಲೇಜಿನ ಕಮಾಂಡೆAಟ್, ಡೆಪ್ಯುಟಿ ಕಮಾಂಡೆAಟ್, ಕರ್ನಾಟಕ ಕೇರಳ ಸಬ್ ಏರಿಯಾದ ಜೆ.ಓ.ಸಿ. ಸೇರಿದಂತೆ ಸೇನಾ ಮುಖ್ಯಸ್ಥರು, ಕೊಡವ ಸಮಾಜದ ಪ್ರಮುಖರಾದ ಎಂ.ಟಿ. ನಾಣಯ್ಯ, ಮೀರಾ ಜಲಜ ಕುಮಾರ್, ಸುರೇಶ್ ನಂಜಪ್ಪ ಹಾಗೂ ಇತರ ಪದಾಧಿಕಾರಿಗಳು, ಮಾಜಿ ಉಪಾಧ್ಯಕ್ಷೆ ಮೊಣ್ಣಂಡ ಸೀತಾ ಅಯ್ಯಣ್ಣ, ನಿವೃತ್ತ ಮೇ.ಜ. ಮೂವೆರ ಸಿ. ನಂಜಪ್ಪ ಮತ್ತಿತರ ಸೇನಾಧಿಕಾರಿಗಳು ಪಾಲ್ಗೊಂಡಿದ್ದರು.

ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕದ ವತಿಯಿಂದ, ಕಾವೇರಿ ಕಾಲೇಜು ಸಮೀಪ ಇರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರ ಜೋಡಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜನರಲ್ ತಿಮ್ಮಯ್ಯನವರ ಜನ್ಮದಿನ ಆಚರಿಸಲಾಯಿತು.

ಈ ಸಂದರ್ಭ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ವೈದ್ಯ ಡಾ. ಶಿವಪ್ಪ ಮಾತನಾಡಿ, ಶಿಸ್ತು ಸಮಯಪಾಲನೆ, ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದ, ಅಪ್ರತಿಮ ದೇಶಪ್ರೇಮಿ ಜನರಲ್ ತಿಮ್ಮಯ್ಯ ಅವರ ಆದರ್ಶಗಳನ್ನು ಇಂದಿನ ಯುವಜನತೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾವೇರಿ ಪದವಿ ಕಾಲೇಜು ಉಪ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ ಮಾತನಾಡಿ ಕೊಡಗಿನ ಕೀರ್ತಿ ಪತಾಕೆಯನ್ನು ವಿಶ್ವದೆತ್ತರಕ್ಕೇರಿಸಿದ ಧೀಮಂತ ನಾಯಕರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರು ಎಂದು ಬಣ್ಣಿಸಿದರು.

ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, ಭಾರತೀಯ ಸೈನ್ಯದಲ್ಲಿ ಶಿಸ್ತು ಹಾಗೂ ಸಮಯ ಪಾಲನೆಯನ್ನು ಮೂಡಿಸಿದ ಜನರಲ್ ತಿಮ್ಮಯ್ಯ ನವರಂತಹ ವೀರ ಸೇನಾನಿಗಳು ನಮ್ಮ ಕೊಡಗಿನ ಮಣ್ಣಲ್ಲಿ ಮತೊಮ್ಮೆ ಹುಟ್ಟಿ ಬರಲಿ ಎಂದರು. ಎನ್‌ಸಿಸಿ ಕೆಡೆಟ್‌ಗಳು ದೇಶ ಭಕ್ತಿಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರೊ. ಎಂ.ಎಸ್. ಭಾರತಿ, ಎನ್.ಸಿ.ಸಿ. ಅಧಿಕಾರಿಗಳಾದ ಲೆಫ್ಟಿನೆಂಟ್ ಎಂ.ಆರ್. ಅಕ್ರಂ, ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ, ಮಾಜಿ ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಬ್ರೆöÊಟಕುಮಾರ್, ಕಾವೇರಿ ಕಾಲೇಜು ಸಿಬ್ಬಂದಿ ಹಾಗೂ ಎನ್‌ಸಿಸಿ ಕೆಡೆಟ್‌ಗಳು ಹಾಜರಿದ್ದರು.