ಕೂಡಿಗೆ, ಮಾ. ೩೧: ಜಿಲ್ಲೆಯಲ್ಲಿ ಪರ್ಯಾಯ ಬೆಳೆಯಾಗಿ ಹೆಚ್ಚು ರೈತರು ಈ ಬಾರಿ ಸಿಹಿ ಗೆಣಸು ಬೆಳೆದಿದ್ದಾರೆ.

ಕಳೆದ ಒಂದು ವರ್ಷಗಳಿಂದಲೂ ಸಿಹಿ ಗೆಣಸಿನ ಬೆಲೆ ತೀರ ಕಡಿಮೆಯಾಗಿತ್ತು. ಅಲ್ಲದೆ ಕೊರೊನಾ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಸಿಹಿ ಗೆಣಸು ಸಾಗಾಟ ಆಗದೆ ಇದ್ದುದರಿಂದ ಬೆಲೆ ಭಾರೀ ಕುಸಿತ ಕಂಡು ಅನೇಕ ರೈತರು ಸಿಹಿ ಗೆಣಸಿನ ಬೆಳೆಯನ್ನು ಕೀಳದೆ ಉಳುಮೆ ಮಾಡಿದ ಪ್ರಸಂಗಗಳು ನಡೆದಿದ್ದವು. ಆದರೆ ಇದೀಗ ಕಳೆದ ಒಂದು ತಿಂಗಳುಗಳಿAದ ಸಿಹಿ ಗೆಣಸಿನ ಬೆಲೆ ಸ್ವಲ್ಪಮಟ್ಟಿಗೆ ಏರಿಕೆ ಆಗಿರುವುದರಿಂದಾಗಿ ರೈತರು ಸ್ವಲ್ಪ ನೆಮ್ಮದಿ ಕಾಣುವಂತಾಗಿದೆ.

ಸಿಹಿ ಗೆಣಸಿನ ಬೇಸಾಯಕ್ಕೆ ಖರ್ಚು ಕಡಿಮೆ ಇರುವುದರಿಂದ ಮತ್ತು ಗೆಣಸಿನ ಬಳ್ಳಿಯು ಹಸುಗಳಿಗೆ ಉತ್ತಮವಾದ ಆಹಾರವಾಗಲಿದೆ. ಅಲ್ಲದೆ ಶುಂಠಿ ಬೆಳೆಯ ಮಾದರಿಯಲ್ಲಿ ಹೆಚ್ಚು ನೀರಿನ ಅವಶ್ಯಕತೆ ಇರುವುದಿಲ್ಲ, ಬೇಸಾಯಕ್ಕೆ ಕಡಿಮೆ ಮಂದಿ ಜನರು ಕೆಲಸದಲ್ಲಿ ತೊಡಗಿ ಉತ್ತಮವಾದ ಬೆಳೆಯನ್ನು ತೆಗೆಯಬಹುದು. ಆದರೆ ಬೆಳೆ ಬಂದು ಬೆಲೆ ಸಿಗದಿದ್ದರೆ ನಷ್ಟವಾಗುವ ಸಂಭವ ಹೆಚ್ಚು.

ಆದರೆ ಕಳೆದ ತಿಂಗಳುಗಳಿAದ ಜಿಲ್ಲೆಯಲ್ಲಿ ಸಿಹಿ ಗೆಣಸಿನ ಬೆಳೆ ೫ ರೂ. ಕೆಜಿಗೆ ಇದ್ದದ್ದು ಇದೀಗ ಕೆಜಿ ಗೆ ೧೨ ರೂ.ನಿಂದ ೧೩ ರೂ.ವರೆಗೆ ಏರಿಕೆಯಾಗಿದೆ.

ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯ ನೂರಾರು ರೈತರು ಈ ಸಾಲಿನಲ್ಲಿ ಬೆಲೆ ಏರಿಕೆ ಆದ ಹಿನ್ನೆಲೆಯಲ್ಲಿ ಹೆಚ್ಚು ಸಿದ್ದಪಡಿಸಿದ ಜಮೀನಿನಲ್ಲಿ ನೆಟ್ಟು ಬೇಸಾಯ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಬೆಳೆಯು ನೆಟ್ಟ ಮೂರು ತಿಂಗಳುಗಳಲ್ಲಿ ಒಂದು ಕೆಜಿಯಷ್ಟು ದಪ್ಪವಾಗಿ ಬೆಳೆದು ಮಾರಾಟಕ್ಕೆ ಸಿದ್ಧವಾಗುವುದು. ಇದರಿಂದಾಗಿ ಈ ಭಾಗದ ಅನೇಕ ರೈತರು ಸಿಹಿ ಗೆಣಸಿನ ಬೆಳೆ ಬೆಳೆಯಲು ಹೆಚ್ಚಾಗಿ ತೊಡಗಿರುವುದು ಕಂಡುಬರುತ್ತಿದೆ.

- ಕೆ.ಕೆ. ನಾಗರಾಜಶೆಟ್ಟಿ.