ಗೋಣಿಕೊಪ್ಪಲು, ಮಾ. ೩೦: ನರಹಂತಕ ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಕಾರ್ಯಾಚರಣೆ ಬಿರುಸುಗೊಂಡಿದೆ.ಬಿಟ್ಟAಗಾಲ ಸಮೀಪದ ಕಂಡಗಾಲ ಬಳಿಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೀಡು ಬಿಟ್ಟಿದ್ದಾರೆ.ಸ್ಥಳೀಯ ಶಾಲೆಯ ಆವರಣದಲ್ಲಿ ಕ್ಯಾಂಪ್ ತೆರೆಯಲಾಗಿದ್ದು, ವೀರಾಜಪೇಟೆ, ಮಡಿಕೇರಿ ಹಾಗೂ ನಾಗರಹೊಳೆ ವ್ಯಾಪ್ತಿಯ ಡಿಎಫ್ಓಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಕ್ಯಾಂಪ್ಗೆ ಭೇಟಿ ನೀಡಿದ ಸಿಸಿಎಫ್ ಶಂಕರ್ ಅಲ್ಲಿನ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಕಲೆ ಹಾಕಿದರು.
ಹುಲಿಯ ಜಾಡನ್ನು ಹರಸಿ ತೆರಳುವ ವೇಳೆ ಸಿಬ್ಬಂದಿಗಳು ಅತ್ಯಂತ ಜಾಗ್ರತೆಯಿಂದ ಕೆಲಸ ನಿರ್ವಹಿಸಲು ಶಂಕರ್ ನಿರ್ದೇಶನ ನೀಡಿದರು.
ಸ್ಥಳದಲ್ಲಿ ಪ್ರತಿದಿನ ಓರ್ವ ಡಿಎಫ್ಓ ಕಡ್ಡಾಯವಾಗಿ ಇದ್ದು, ಕಾರ್ಯಾಚರಣೆ ವಿವರಗಳನ್ನು ನೀಡುವಂತೆ ಈ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮತ್ತಿಗೋಡು ಆನೆ ಶಿಬಿರದಿಂದ ಎರಡು ಸಾಕಾನೆಗಳನ್ನು ಹುಲಿ ಕಾರ್ಯಾಚರಣೆಗೆ ಬಳಕೆ ಮಾಡಿಕೊಳ್ಳಲಾಗಿದೆ.
ಆನೆಯ ಜೊತೆಯಲ್ಲಿ ನುರಿತ ಶಾರ್ಪ್ ಶೂಟರ್ ಹಾಗೂ ವೈದ್ಯರು ತೆರಳುತ್ತಿದ್ದಾರೆ.
ವಿವಿಧ ಗುಂಪುಗಳಲ್ಲಿ ಕಾರ್ಯಾ ಚರಣೆ ತಂಡ ಸುತ್ತಮುತ್ತಲಿನ ಪ್ರದೇಶದ ಕಾಡುಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ.
(ಮೊದಲ ಪುಟದಿಂದ) ಸುಮಾರು ಹತ್ತು ಕೀ. ಮೀಟರ್ ಸುತ್ತಳತೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಗಸ್ತು ತಿರುಗುವಿಕೆ ಮೂಲಕ ಕೂಂಬಿAಗ್ ನಡೆಸುತ್ತಿದ್ದಾರೆ.
ಮಡಿಕೇರಿ, ಪೊನ್ನಂಪೇಟೆ, ತಿತಿಮತಿ, ಮಾಕುಟ್ಟ ಭಾಗದಿಂದ ಅರಣ್ಯ ಸಿಬ್ಬಂದಿಗಳು ಕ್ಯಾಂಪ್ ಸೇರಿಕೊಂಡಿದ್ದಾರೆ. ಇವರೊಂದಿಗೆ ಎಸ್.ಟಿ.ಎಫ್. ವಿಶೇಷ ತುಕಡಿಗಳು ಕಾರ್ಯಾರಂಭ ಮಾಡಿವೆ.
ವೀರಾಜಪೇಟೆ ಡಿಎಫ್ಓ ಚಕ್ರಪಾಣಿ, ಮಡಿಕೇರಿ ಡಿಎಫ್ಓ ಎ.ಟಿ. ಪೂವಯ್ಯ ಹಾಗೂ ಶಿವರಾಮ್ ಬಾಬು ಸೇರಿದಂತೆ ತಿತಿಮತಿ ವಲಯ ಎಸಿಎಫ್ ಉತ್ತಪ್ಪ, ಪೊನ್ನಂಪೇಟೆ ಆರ್.ಎಫ್.ಓ. ಅಶೋಕ್ ಹುನಗುಂದ, ಸಿಬ್ಬಂದಿಗಳಾದ ದಿವಾಕರ್ ಮತ್ತಿತರರು ಹುಲಿ ಕಾರ್ಯಾಚರಣೆ ಬಗ್ಗೆ ಸಿಬ್ಬಂದಿಗಳಿಗೆ ನಿರ್ದೇಶನ ನೀಡುತ್ತಿದ್ದಾರೆ.
ರಾತ್ರಿಯ ವೇಳೆ ಹುಲಿಯ ಸಂಚಾರ ಕಂಡು ಬಂದಲ್ಲಿ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದ್ದಾರೆ.
ಬಿಟ್ಟಂಗಾಲ ಸಮೀಪದ ೧ನೇ ರುದ್ರ್ರಗುಪ್ಪೆ ಬಳಿ ಅಮಾಯಕ ಕಾರ್ಮಿಕ ಗಣೇಶ್ ಹುಲಿಯ ದಾಳಿಗೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರೈತ ಸಂಘ ಹಾಗೂ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿ, ಹುಲಿಯನ್ನು ಕೊಲ್ಲುವಂತೆ ಒತ್ತಾಯ ಮಾಡಿದ್ದರು.
ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹುಲಿಯನ್ನು ಸೆರೆಹಿಡಿಯುವ ಭರವಸೆ ನೀಡಿದ್ದರು.
ಕಾರ್ಯಾಚರಣೆ ಇದೀಗ ಎರಡನೇ ದಿನಕ್ಕೆ ಕಾಲಿರಿಸಿದೆ, ಯಾವುದೇ ಕುರುಹುಗಳು ಸದ್ಯದ ಮಟ್ಟಿಗೆ ಲಭಿಸಿಲ್ಲ.