ಮಡಿಕೇರಿ ಮಾ.೩೦ : ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಿಂದ ನಡೆಯುತ್ತಿರುವ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಹಣ ದುರುಪಯೋಗವಾಗುತ್ತಿದೆ ಎಂದು ಕೊಡಗು ರಕ್ಷಣಾ ವೇದಿಕೆ ಆರೋಪಿಸಿದೆ.

ಸುರಿಯುವ ಮಳೆಯ ನಡುವೆ ರಸ್ತೆ ಡಾಂಬರೀಕರಣ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ವೇದಿಕೆ ಪ್ರಮುಖರು ಒತ್ತಾಯಿಸಿದ್ದಾರೆ.

ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಅವರ ನೇತೃತ್ವದಲ್ಲಿ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಪೌರಾಯುಕ್ತ ರಾಮದಾಸ್ ಅವರನ್ನು ಭೇಟಿಯಾದ ನಗರ ಘಟಕದ ಪದಾಧಿಕಾರಿಗಳು ಕಳಪೆ ಕಾಮಗಾರಿ ವಿರುದ್ಧ ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮಾ.೨೯ ರಂದು ಸಂಜೆ ಮಳೆ ಸುರಿಯುತ್ತಿದ್ದ ಸಂದರ್ಭ ಮಾರುಕಟ್ಟೆಯ ಹಿಂಭಾಗದಲ್ಲಿ ಶಾಸಕರ ಅನುದಾನದಲ್ಲಿ ರಸ್ತೆ ಡಾಂಬರೀಕರಣ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಡಿಕೇರಿ ನಗರಸಭೆಯ ಗೌರವಕ್ಕೆ ದಕ್ಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪವನ್ ಪೆಮ್ಮಯ್ಯ ಮಳೆ ಸುರಿಯುತ್ತಿದ್ದ ಸಂದರ್ಭ ಡಾಂಬರೀಕರಣ ನಡೆದಿದೆ, ಇದೇ ರೀತಿ ವಿವಿಧೆಡೆ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿದರು.

ಮಳೆಯಲ್ಲಿ ಡಾಂಬರೀಕರಣ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾಮಗಾರಿ ಉಸ್ತುವಾರಿಯ ಅಭಿಯಂತರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಪ್ಪಿದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಅಧ್ಯಕ್ಷರಾದ ಅನಿತಾ ಪೂವಯ್ಯ ಮಾತನಾಡಿ ಮಳೆ ಬರುವ ಸಂದರ್ಭ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿತ್ತು, ಉಳಿದಿದ್ದ ಡಾಂಬರನ್ನು ಹಾಳು ಮಾಡಬಾರದೆಂದು ರಸ್ತೆಗೆ ಹಾಕಿದ್ದಾರೆ ಅಷ್ಟೇ ಎಂದು ಸ್ಪಷ್ಟ ಪಡಿಸಿದರು.

ಪೌರಾಯುಕ್ತ ರಾಮದಾಸ್ ಮಾತನಾಡಿ ಕಾಮಗಾರಿಯನ್ನು ಪರಿಶೀಲಿಸಿ ಲೋಪ ಇದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೊರವೇ ಮಡಿಕೇರಿ ನಗರಾಧ್ಯಕ್ಷ ಶರತ್ ಚೊಟ್ಟೆಯಂಡ, ಕಾರ್ಯಾಧ್ಯಕ್ಷ ಮಹೇಶ್, ಉಸ್ತುವಾರಿ ಪಿ.ವೈ.ಸುಲೆಮಾನ್, ಖಜಾಂಚಿ ರಮೇಶ್ ಗೌಡ, ನಿರ್ದೇಶಕ ಪಾಪು ರವಿ, ಬೆಟ್ಟಗೇರಿ ಘಟಕ ಅಧ್ಯಕ್ಷ ಮಸೂದ್, ಸೋಮವಾರಪೇಟೆ ಉಪಾಧ್ಯಕ್ಷ ಶಾನ್ ಮನವಿ ನೀಡುವ ಸಂದರ್ಭ ಹಾಜರಿದ್ದರು.

ಪವನ್ ಪೆಮ್ಮಯ್ಯ ಹಾಗೂ ಅಧ್ಯಕ್ಷರ ನಡುವೆ ಕಾಮಗಾರಿ ಕುರಿತು ತೀವ್ರ ಚರ್ಚೆ ನಡೆಯಿತು. ಸುಳ್ಳು ಆರೋಪಗಳಿಗೆ ಕಿವಿಗೊಡಬೇಡಿ ಎಂದು ಅಧ್ಯಕ್ಷೆ ಅನಿತಾ ಪೂವಯ್ಯ ಮನವಿ ಮಾಡಿದರು.