ಮಡಿಕೇರಿ, ಮಾ. ೩೦: ೨೦೨೪ರ ಹೊತ್ತಿಗೆ ದೇಶದ ಎಲ್ಲಾ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಕಾರ್ಯಾತ್ಮಕ ಗೃಹ ನಳ ನೀರು ಸಂಪರ್ಕ (ಫಂಕ್ಷನಲ್ ಹೌಸ್ ಟ್ಯಾಪ್ ಕನೆಕ್ಷನ್) ಕಲ್ಪಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದ್ದು, ಇದಕ್ಕಾಗಿ ಜಲಜೀವನ್ ಮಿಷನ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಅದರಂತೆ ಕೊಡಗು ಜಿಲ್ಲೆಯಲ್ಲಿ ಯೋಜನೆ ಪ್ರಗತಿ ಸಾಧಿಸುತ್ತಿದ್ದು, ಈಗಾಗಲೇ ೧೦೨ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ.ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನದ ಮೂಲಕ ಯೋಜನೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೈಗೆತ್ತಿಕೊಳ್ಳುತ್ತಿದೆ. ಈಗಾಗಲೇ ಯೋಜನೆ ಸಂಬAಧ ನಿಗದಿತ ಗುರಿಯನ್ನು ಹೊಂದಲಾಗಿದೆ. ಜಿಲ್ಲೆಯ ೪೬೧ ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಮೂರು ಹಂತಗಳಲ್ಲಿ ಕಾಮಗಾರಿಯನ್ನು ವಿಂಗಡಿಸಲಾಗಿದ್ದು, ಅದರಂತೆ ಕೆಲಸಗಳು ನಡೆಯುತ್ತಿವೆ.
ಮೂರು ಹಂತಗಳು
ಮೂರು ಹಂತಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಕಾರ್ಯಗತವಾಗುತ್ತಿದೆ. ಬ್ಯಾಚ್ ೧, ೨ ಹಾಗೂ ೩ ಹೀಗೆ ಮೂರು ಹಂತದಲ್ಲಿ ವಿಂಗಡಿಸಲಾಗಿದೆ. ಈ ಪೈಕಿ ಬ್ಯಾಚ್ ೧ ರಲ್ಲಿ ಒಟ್ಟು ೧೮೮ ಕಾಮಗಾರಿಗಳ ಗುರಿಯನ್ನು ಹೊಂದಲಾಗಿದೆ. ಇದರಲ್ಲಿ ೧೦೨ ಕಾಮಗಾರಿಗಳು ಮುಗಿದಿವೆ. ೮೬ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದಕ್ಕಾಗಿ ಇಟ್ಟು ೪೨೬೯.೪೪ ಲಕ್ಷ ಹಣ ವೆಚ್ಚವಾಗಲಿದೆ.
ಬ್ಯಾಚ್ ೨ ರಲ್ಲಿ ಒಟ್ಟು ೧೩೫ ಕಾಮಗಾರಿಗಳ ಗುರಿ ಹೊಂದಲಾಗಿದ್ದು, ಈ ಪೈಕಿ ೧೩೩ ಕಾಮಗಾರಿಗಳು ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿಯನ್ನು ಪಡೆದುಕೊಂಡಿವೆ. ಇದಕ್ಕಾಗಿ ರೂ. ೭೨೩೩.೫೨ ಲಕ್ಷ ಅಂದಾಜು ಪಟ್ಟಿ ತಯಾರಿಸಿ ಕ್ರಿಯಾ ಯೋಜನೆ ತಯಾರಿಸಲಾಗಿದೆ.
ಬ್ಯಾಚ್ ೩ರಲ್ಲಿ ೧೩೮ ಕಾಮಗಾರಿಗಳ ಗುರಿ ಪೈಕಿ ೯೬ ಕಾಮಗಾರಿಗಳು ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿಯನ್ನು ಪಡೆದುಕೊಂಡಿವೆ. ರೂ. ೧೧೬೧೧ ಲಕ್ಷ ಅಂದಾಜು ವೆಚ್ಚ ಎಂದು ಕ್ರಿಯಾಯೋಜನೆ ರೂಪಿಸಲಾಗಿದೆ. ಬ್ಯಾಚ್ ೨ ಹಾಗೂ ೩ರಲ್ಲಿ ಉಳಿದಿರುವ ಕಾಮಗಾರಿಗಳಿಗೆ ಪ್ರಕ್ರಿಯೆ ಇನ್ನಷ್ಟೆ ಆರಂಭವಾಗಬೇಕಾಗಿದೆ.
ನಲ್ಲಿ ನೀರು ಸಂಪರ್ಕ
ನದಿ, ಬೋರ್ವೆಲ್, ಬಾವಿಗಳು ಸೇರಿದಂತೆ ವಿವಿಧ ಜಲಮೂಲಗಳನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳಿಗೆನಲ್ಲಿ ನೀರಿನ ಸಂಪರ್ಕವನ್ನು ಜಲಜೀವನ್ ಮಿಷನ್ ಯೋಜನೆ ಮೂಲಕ ಒದಗಿಸಲು ಉದ್ದೇಶಿಸಲಾಗಿದೆ.
ಜಲಮೂಲಗಳ ಮೂಲಕ ಓವರ್ ಹೆಡ್ ಟ್ಯಾಂಕ್ಗೆ ನೀರು ಹರಿಸಿ ಬಳಿಕ ಮನೆಮನೆಗೆ ನೀರು ಪೂರೈಕೆ ಮಾಡಲಾಗುತ್ತದೆ. ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿರುವ ಹಿನ್ನೆಲೆ ಚದುರಿದ ಮನೆಗಳು ಹೆಚ್ಚಾಗಿರುವುದು ಯೋಜನೆ ಕಾರ್ಯಗತಕ್ಕೆ ಕೊಂಚ ಹಿನ್ನಡೆಯಾಗಿದೆ. ಜೊತೆಗೆ ಕೆಲವೆಡೆ ಜಾಗದ ಆಕ್ಷೇಪಣೆಗಳಿದ್ದು ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು
(ಮೊದಲ ಪುಟದಿಂದ) ಕಲ್ಪಿಸಬೇಕಾದ ಪರಿಸ್ಥಿತಿ ಇದೆ. ಇವೆಲ್ಲ ಸವಾಲಿನ ನಡುವೆ ಜಿಲ್ಲೆಯಲ್ಲಿ ಜಲಜೀವನ್ ಯೋಜನೆ ಯಶಸ್ವಿಯಾಗಿ ಕಾರ್ಯಗತಗೊಳ್ಳುತ್ತಿದೆ. ಅದಲ್ಲದೆ ನೀರಿನ ಸಮಸ್ಯೆ ಇದ್ದ ಹಲವು ಜಾಗಗಳಲ್ಲಿ ಕುಡಿಯುವ ನೀರು ಲಭ್ಯವಾಗಲಿದೆ.
ಜಲಜೀವನ್ ಯೋಜನೆ ಮೂಲಕ ನೀರು ಒದಗಿಸುವ ಜೊತೆಗೆ ಅದಕ್ಕಾಗಿ ಮೀಟರ್ ಒಂದನ್ನು ಅಳವಡಿಸಲಾಗಿರುತ್ತದೆ. ಅದರಿಂದ ಮನೆಗೆ ಒದಗಿಸುತ್ತಿರುವ ನೀರಿನ ಪ್ರಮಾಣದ ದಾಖಲಾತಿ ಕೂಡ ದೊರಕುತ್ತದೆ.
ಕೇಂದ್ರ ಹಾಗೂ ರಾಜ್ಯ ಸರಕಾರದಿಂದ, ೧೫ನೇ ಹಣಕಾಸು ನಿಧಿಯಿಂದ, ಸಮುದಾಯ ವಂತಿಕೆ ಮೂಲಕ ಯೋಜನೆಗೆ ಅನುದಾನ ಪಡೆದುಕೊಂಡು ಅನುಷ್ಠಾನ ಮಾಡಲಾಗುತ್ತಿದೆ.
೨೦೨೪ರೊಳಗೆ ಗುರಿ ಸಾಧನೆ
ರಾಜ್ಯ ಹಾಗೂ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಜಲಜೀವನ್ ಮಿಷನ್ ಅನ್ನು ೨೦೨೪ರೊಳಗೆ ಗುರಿ ಮುಟ್ಟವ ನಿಟ್ಟಿನಲ್ಲಿ ವೇಗವಾಗಿ ಕೆಲಸಗಳು ನಡೆಯುತ್ತಿವೆ. ಜಿಲ್ಲೆಯಲ್ಲಿಯೂ ಕೂಡ ಗುರಿ ಸಾಧಿಸುವ ನಿಟ್ಟಿನಲ್ಲಿ ಕಾಮಗಾರಿಗಳು ಕ್ಷಿಪ್ರಗತಿಯಲ್ಲಿ ಸಾಗುತ್ತಿವೆ.
ಅಂಗನವಾಡಿ, ಶಾಲೆಗಳಿಗೂ ಈ ಯೋಜನೆ ಮೂಲಕ ನೀರು ಸಂಪರ್ಕ ಕಲ್ಪಿಸಬಹುದಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಜಲಮೂಲಗಳಿಗೆ ಕೊಡಗಿನಲ್ಲಿ ಸಮಸ್ಯೆ ಇಲ್ಲ. ವರ್ಷದ ೨ ತಿಂಗಳು ಮಾತ್ರ ನೀರಿನ ಅಭಾವ ಸೃಷ್ಟಿಯಾಗುತ್ತದೆ. ಉಳಿದಂತೆ ಸಮರ್ಪಕವಾಗಿ ನೀರು ಪೂರೈಕೆ ಮಾಡಬಹುದು ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ನಿರ್ವಹಣೆ ಹೇಗೆ?
ಜಲಜೀವನ್ ಮೂಲಕ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದ ಬಳಿಕ ಆಯಾ ಗ್ರಾಮ ಪಂಚಾಯ್ತಿಗಳು ಇದರ ನಿರ್ವಹಣೆ ಮಾಡಬೇಕಾಗಿದೆ. ಜಲಮೂಲಗಳಿಂದ ಒವರ್ ಹೆಡ್ ಟ್ಯಾಂಕ್ ನಿರ್ವಹಣೆ, ವಿದ್ಯುತ್ ಸಂಬAಧಿತ ನಿರ್ವಹಣೆಯನ್ನು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾಡಲಿದೆ.
ಉಳಿದಂತೆ ಗ್ರಾಮ ಪಂಚಾಯ್ತಿ ಇದರ ಮೇಲುಸ್ತುವಾರಿ ವಹಿಸಲಿದೆ. ತಾಂತ್ರಿಕವಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೇ ಸಹಾಯ ಮಾಡಲಿದೆ. ಕುಡಿಯುವ ನೀರಿನ ಶುದ್ಧತೆ ಸಂಬAಧ ಆರೋಗ್ಯ ಇಲಾಖೆ ಪರಿಶೀಲನೆ ನಡೆಸಲಿದೆ.
- ಹೆಚ್.ಜೆ. ರಾಕೇಶ್