(ಚಿತ್ರ ವರದಿ : ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮಾ.೨೯: ಕಾರ್ಮಿಕನನ್ನು ಬಲಿ ತೆಗೆದುಕೊಂಡ ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಲ್ಲುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ೧ನೇ ರುದ್ರಗುಪ್ಪೆ ಗ್ರಾಮಸ್ಥರು ಪ್ರತಿಭಟಿಸಿದರು.ಸೋಮವಾರ ಎಂದಿನAತೆ ಕೂಲಿ ಕೆಲಸಕ್ಕಾಗಿ ಕರಿಮೆಣಸು ಕೊಯ್ಯಲು ಬಿಟ್ಟಂಗಾಲ ಸಮೀಪದ ೧ನೇ ರುದ್ರಗುಪ್ಪೆ ಗ್ರಾಮದ ಅಯ್ಯಪ್ಪ ಎಂಬುವರ ಕಾಫಿತೋಟಕ್ಕೆ ಆಗಮಿಸಿದ್ದ ಗೋಣಿಕೊಪ್ಪ ಸಮೀಪದ ಗದ್ದೆ ಮನೆಯ ಲೈನ್ ಮನೆಯಿಂದ ಗಣೇಶ್ ಆಲಿಯಾಸ್ (ಪುಟ್ಟು) ತೆರಳಿದ್ದ ಮಧ್ಯಾಹ್ನದ ವೇಳೆ ಈತನ ಮೇಲೆ ನರಭಕ್ಷಕ ಹುಲಿಯೊಂದು ದಾಳಿ ನಡೆಸಿಕೊಂದು ಹಾಕಿತ್ತು. ಇದನ್ನು ಖಂಡಿಸಿ ಗ್ರಾಮಸ್ಥರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ನರಹಂತಕ ಹುಲಿಯನ್ನು ಗುಂಡಿಕ್ಕಿ ಕೊಲ್ಲುವಂತೆ ಆಗ್ರಹಿಸಿದ್ದರು. ಅಲ್ಲದೆ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದಿದ್ದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಹಾಗೂ ಹಿರಿಯ ಮುಖಂಡರಾದ ಕೊಲ್ಲೀರ ಬೋಪಣ್ಣ ಮುಂದಾಳತ್ವದಲ್ಲಿ ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ಮೃತದೇಹವನ್ನು ಸ್ಥಳದಲ್ಲಿಟ್ಟು ಅಹೋ ರಾತ್ರಿ ಧರಣಿ ನಡೆಸಿದ್ದರು. ಮುಂಜಾನೆ ವೇಳೆ ಮತ್ತೆ ಪ್ರತಿಭಟನೆಯು ಮುಂದುವರೆದಿತ್ತು. ಈ ವೇಳೆ ಬೆಂಗಳೂರಿನಲ್ಲಿದ್ದ ವೀರಾಜಪೇಟೆ ಡಿಎಫ್‌ಒ ಚಕ್ರಪಾಣಿ ಆಗಮಿಸಿದರು. ಹೋರಾಟಗಾರರು ಇವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಮಾಯಕನ ಪ್ರಾಣ ಹೋಗಲು ತಾವೇ ಕಾರಣ ಎಂದು ಆರೋಪಿಸಿದರು. ವಾರದ ಹಿಂದೆ ಈ ಬಗ್ಗೆ ಮನವಿ ಸಲ್ಲಿಸಿ ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರೂ ಇದನ್ನು ಪರಿಗಣಿಸದೆ ಇರುವುದೇ ಇದಕ್ಕೆ ಕಾರಣ ಎಂದು ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಅಧಿಕಾರಿಗಳ ಮೇಲೆ ಹರಿಹಾಯ್ದರು.

ಕರ್ನಾಟಕ ರಾಜ್ಯ ರೈತ ಸಂಘದÀ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಮನು ಸೋಮಯ್ಯ ಆಗಮಿಸುತ್ತಿ ದ್ದಂತೆಯೇ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು, ರೈತ ಸಂಘದ ಸದಸ್ಯರು ನೂರಾರು ಸಂಖ್ಯೆಯಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿ ಅರಣ್ಯ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜನತೆಯ ಕಷ್ಟವನ್ನು ಆಲಿಸದ ವೀರಾಜಪೇಟೆ ಡಿಎಫ್‌ಒ ಚಕ್ರಪಾಣಿ ಇವರನ್ನು ಇಲ್ಲಿಂದ ವರ್ಗಾವಣೆ ಗೊಳಿಸುವಂತೆ ಆಗ್ರಹಿಸಿದರು. ಡಿಎಫ್‌ಒ ಅವರನ್ನು ಹುಲಿ ಕಾರ್ಯಾಚರಣೆಯ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರ ಬಯಸಿದರು. ಕೇವಲ ಬಾಯಿ

(ಮೊದಲ ಪುಟದಿಂದ) ಮಾತಿನಲ್ಲಿ ಉತ್ತರಿಸುತ್ತಿರುವುದರಿಂದ ಯಾವುದೇ ಪ್ರಯೋಜನವಿಲ್ಲ ಕೈಗೊಂಡ ಕ್ರಮಗಳ ಬಗ್ಗೆ ಹಾಗೂ ಮೇಲಾಧಿಕಾರಿಗಳಿಗೆ ಬರೆದ ಪತ್ರದ ಬಗ್ಗೆ ಮನು ಸೋಮಯ್ಯ ಮಾಹಿತಿ ಬಯಸಿದರು. ಇವರ ಮಾತಿಗೆ ಅಸಮಾಧಾನಗೊಂಡ ಡಿಎಫ್‌ಒ ಚಕ್ರಪಾಣಿ ಯಾವುದೇ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಇದರಿಂದ ಮನುಸೋಮಯ್ಯ ಡಿಎಫ್‌ಒರವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ವೇಳೆ ಚಕ್ರಪಾಣಿ ಹಾಗೂ ಮನು ಸೋಮಯ್ಯನವರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೈಕೈ ಮಿಲಾಯಿಸುವ ಪರಿಸ್ಥಿತಿ ನಿರ್ಮಾಣವಾಯಿತು.

ಇದರಿಂದ ಕಾರ್ಯಕರ್ತರು ಅಸಮಾಧಾನಗೊಂಡು ಚಕ್ರಪಾಣಿಯ ಮೇಲೆ ಮುಗಿಬೀಳುವ ಪ್ರಯತ್ನ ನಡೆಸಿದರು. ಸ್ಥಳದಲ್ಲಿದ್ದ ಡಿವೈಎಸ್ಪಿ ಜಯಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್, ಜಯರಾಮ್, ಮಂಜಪ್ಪ, ಕೂಡಲೇ ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನು ತಹಬದಿಗೆ ತಂದರು. ಸ್ಥಳದಲ್ಲಿದ್ದ ಡಿಎಫ್‌ಒ ಚಕ್ರಪಾಣಿ ವಾಪಸ್ಸು ನಡೆದರು. ಇವರ ನಡೆಯನ್ನು ಖಂಡಿಸಿ ರೈತ ಸಂಘದ ಸದಸ್ಯರು ಇವರನ್ನುರಸ್ತೆಯಲ್ಲಿ ಅಡ್ಡಗಟ್ಟಿ ಪ್ರತಿಭಟಿಸಿ ದಿಕ್ಕಾರ ಕೂಗಿದರು. ಈ ನಡುವೆ ದೊಡ್ಡ ಹೈಡ್ರಾಮವೇ ನಡೆದು ಹೋಯಿತು. ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿರುವುದನ್ನು ಗಮನಿಸಿದ ಡಿವೈಎಸ್ಪಿ ಜಯಕುಮಾರ್ ಹಾಗೂ ಮಡಿಕೇರಿ ವಿಭಾಗದ ಡಿಎಫ್‌ಒ ಎ.ಟಿ.ಪೂವಯ್ಯ ಚಕ್ರಪಾಣಿಯವರನ್ನು ವಾಪಸ್ಸು ಕರೆಸುವಲ್ಲಿ ಯಶಸ್ವಿಯಾದರು.

ಹೋರಾಟಗಾರರ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿಯ ನಂತರ ಪರಿಸ್ಥಿತಿಯನ್ನು ತಿಳಿಗೊಳಿಸಿದ ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಹಾಗೂ ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ್, ಮೃತದೇಹವನ್ನು ಸ್ಥಳದಿಂದ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಕಲ್ಪಿಸಿದರು. ಈ ವೇಳೆ ಅರಣ್ಯ ಇಲಾಖೆ ವತಿಯಿಂದ ಮೃತನ ಪತ್ನಿಗೆ ತಾತ್ಕಾಲಿಕ ಪರಿಹಾರವಾಗಿ ೨ ಲಕ್ಷ ಚೆಕ್‌ಅನ್ನು ವಿತರಿಸಲಾಯಿತು. ಶವಸಂಸ್ಕಾರ ನಡೆಸಲು ಆರ್‌ಎಫ್‌ಒ ಅಶೋಕ್ ಹುನಗುಂದ ೧೫ ಸಾವಿರ ನಗದನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ರೈತ ಸಂಘದ ಪದಾಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದರು.

ಸ್ಥಳದಲ್ಲಿ ಕಾಡ್ಯಮಾಡ ಗಿರೀಶ್ ಗಣಪತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬಾಂಡ್ ಗಣಪತಿ, ಮಾಜಿ ಜಿ.ಪಂ.ಸದಸ್ಯರಾದ ಭವ್ಯ, ಬಿ.ಶೆಟ್ಟಿಗೇರಿ ಗ್ರಾಮದ ಕಡೇಮಾಡ ಕುಸುವi ಜೋಯಪ್ಪ, ಉಮೇಶ್ ಕೇಚಮಯ್ಯ, ಮದ್ರಿರ ಗಿರೀಶ್ ಗಣಪತಿ, ಅಮ್ಮಣಿಚಂಡ ರಂಜಿ ಪೂಣಚ್ಚ, ಲಾಲಾ ಭೀಮಯ್ಯ, ಕೊಲ್ಲೀರ ಬೋಪಣ್ಣ, ಮುಲ್ಲೆಂಗಡ ಶಂಕರಿ, ಚೇರಂಡ ಜಗನ್, ಮೂಕಳೇರ ಕುಶಾಲಪ್ಪ, ಮಾಯಮುಡಿ ರಮೇಶ್, ಯರವ ಸಮಾಜದ ಮಾಜಿ ಅಧ್ಯಕ್ಷರಾದ ಶಾಂತಕುಮಾರ್, ಕಾರ್ಯದರ್ಶಿ ಸಂಜೀವ, ಸೇರಿದಂತೆ ನೂರಾರು ಗ್ರಾಮಸ್ಥರು ಅರಣ್ಯ ಇಲಾಖೆಯ ಮಡಿಕೇರಿ ವನ್ಯಜೀವಿ ವಿಭಾಗದ ಡಿಎಫ್‌ಒ ಶಿವರಾಮ್ ಬಾಬು, ಹುಣಸೂರು ವಲಯ ಎಸಿಎಫ್ ಸತೀಶ್, ತಿತಿಮತಿ ಎಸಿಎಫ್ ಉತ್ತಪ್ಪ, ಆರ್‌ಎಫ್‌ಒ ಅಶೋಕ್, ಸಿಬ್ಬಂದಿಗಳಾದ ದಿವಾಕರ್, ಊರಿನ ಪ್ರಮುಖರಾದ ಅಪ್ಪಂಡೇರAಡ ರವಿ, ರೈತ ಸಂಘದ ಪದಾಧಿಕಾರಿಗಳಾದ ಚೊಟ್ಟೆಕಾಳಪಂಡ ಮನು, ಕಂಬ ಕಾರ್ಯಪ್ಪ, ಭವಿ ಕುಮಾರ್, ಅಜ್ಜಮಾಡ ಚಂಗಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಸ್ಥಳದಲ್ಲಿ ಉಪಸ್ಥಿತರಿದ್ದರು.