*ಗೋಣಿಕೊಪ್ಪ, ಮಾ. ೨೯: ಸಮಾಜದಲ್ಲಿ ಮಹಿಳಾ ವಿರುದ್ಧದ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕುವ ಪ್ರಯತ್ನಕ್ಕೆ ಮಹಿಳೆಯರ ಸಾಮಾರ್ಥ್ಯ ಸಾಬೀತಾಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಸಂಘಟನೆಗಳು ಕಾರ್ಯಪ್ರವೃತ್ತರಾಗಬೇಕು ಎಂದು ಪಂಚಾಯತ್ ರಾಜ್ ಇಲಾಖೆ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಕರೆ ನೀಡಿದರು.

ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಂಥಾಲಯ, ಅಂಗನವಾಡಿ ಕೇಂದ್ರ, ಕುಡಿಯುವ ನೀರು ಘಟಕ, ಮರೂರು ಆಶ್ರಮ ಶಾಲೆ ಮತ್ತು ಸಂಜೀವಿನಿ ಒಕ್ಕೂಟದ ಸಂತೆ ಕಾರ್ಯಕ್ರಮಕ್ಕೆ ಭೇಟಿ ನೀಡಿ ಮಾತನಾಡಿದರು.

ಮಹಿಳೆಯರು ತಮ್ಮ ಅಳುಕು ಮನಸ್ಥಿತಿಯಿಂದ ಹೊರಬಂದು ಸಮಾಜದಲ್ಲಿ ಯಶಸ್ವಿಯನ್ನು ಗಳಿಸಿಕೊಳ್ಳಲು ದಿಟ್ಟ ಪ್ರಯತ್ನ ನಡೆಸಬೇಕು. ಈ ನಿಟ್ಟಿನಲ್ಲಿ ಸಂಘಟನೆಯ ಬಲವರ್ಧನೆಯೊಂದಿಗೆ ಮಹಿಳೆ ಸಬಲೀಕರಣಗೊಳ್ಳಬೇಕೆಂದು ಹೇಳಿದರು.

ಮಹಿಳೆಯರು ಸಮಾಜದ ಒಂದು ಶಕ್ತಿ. ಆದರೂ, ನಿರಂತರವಾಗಿ ಮಹಿಳೆಯರು ಶೋಷಣೆಗೊಳ ಗಾಗುತ್ತಿದ್ದಾರೆ. ಅಂತವರಿಗೆ ಆತ್ಮಸ್ಥೆöÊರ್ಯ ತುಂಬುವ ಮೂಲಕ ಮತ್ತು ಆರ್ಥಿಕ ಬಲವರ್ಧನೆಗಾಗಿ ಮಹಿಳಾ ಪರ ಸಂಘಟನೆಗಳು ಕಾರ್ಯೋನ್ಮುಖವಾಗಬೇಕಾಗಿದೆ. ಮಹಿಳಾ ಸಂಘಟನೆಗಳು ನಡೆಸುವ ಗೃಹೋಪಯೋಗಿ ತಯಾರಿಕ ತರಬೇತಿಗಳಲ್ಲಿ ಮತ್ತು ಮಾರಾಟ ಮೇಳಗಳಲ್ಲಿ ಮಹಿಳೆಯರು ವ್ಯಾಪಾರದಲ್ಲಿ ತೊಡಗಿಸಿಕೊಂಡು ಕೌಟುಂಬಿಕ, ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮುಂದಾಗಬೇಕು. ಇಂತಹ ನಿಲುವುಗಳ ಮೂಲಕ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಶಿಕ್ಷಣ ವೆಚ್ಚಕ್ಕೆ ಸಹಕಾರಿಯಾಗಬಲ್ಲದು ಎಂದು ಸಲಹೆ ನೀಡಿದರು.

ಮಹಿಳಾ ಸಂಘಟನೆಗಳು ಆರ್ಥಿಕ ಬಲವರ್ಧನೆಯಲ್ಲಿ ತೊಡಗಿಸಿಕೊಂಡAತೆ ಸಮಾಜದ ಬದಲಾವಣೆಯಲ್ಲಿಯೂ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. ಮಹಿಳೆಯರು ಸ್ವ ಉದ್ಯೋಗ ಕಂಡು ಕೊಳ್ಳಬೇಕು ಎಂಬ ಚಿಂತನೆಯಲ್ಲಿ ರಾಜ್ಯದ ೬ ಸಾವಿರ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಸವಿಲೇವಾರಿ ಘಟಕ ನಿರ್ವಹಣೆ ಮತ್ತು ವಾಹನ ಚಾಲನೆಗೆ ತರಬೇತಿಯನ್ನು ನೀಡಲಾಗುತ್ತಿದೆ. ಇದರಿಂದ ಮುಂದಿನ ಯುವಪೀಳಿಗೆಗೆ ಮಹಿಳೆಯರು ವಾಹನ ಚಾಲನೆ ಮಾಡುವ ಕಾಯಕ ಪ್ರೇರಣಾದಾಯಕ ವಾಗಿದೆ ಎಂದು ತಿಳಿಸಿದರು.

ಬುಡಕಟ್ಟು ಸಮುದಾಯ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡಲು ಸಂಘಟನೆಗಳು ಆಸಕ್ತಿದಾಯಕ ಕಾರ್ಯಗಳನ್ನು ನಿಭಾಯಿಸಬೇಕು ಎಂದು ಸೂಚಿಸಿದರು.

ಮರೂರು ಆಶ್ರಮ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥಿತ ಪರಿಸರದ ಬಗ್ಗೆ ಪರಿಶೀಲಿಸಿದರು. ನಂತರ ಬುಡಕಟ್ಟು ಸಮುದಾಯದವರು ಹೆಚ್ಚು ಶಿಕ್ಷಣವಂತರಾಗಲು ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಪಂಚಾಯಿತಿ ಜನಪ್ರತಿನಿಧಿ ಗಳು ಹೆಚ್ಚಿನ ಕಾಳಜಿಯೊಂದಿಗೆ ಮಕ್ಕಳನ್ನು ಶಾಲೆಗೆ ಕರೆತರುವ ಅಭಿಯಾನ ನಡೆಸಬೇಕು. ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಗಳನ್ನು ತೊಡೆದು ಹಾಕಲು ಅಧಿಕಾರಿಗಳು ಹಾಗೂ ಸ್ಥಳೀಯ ನಾಯಕರುಗಳು ಕಾಳಜಿ ವಹಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಸಂಜೀವಿನಿ ಒಕ್ಕೂಟ ಆಯೋಜಿಸದ ಸಂತೆ ಮೇಳದಲ್ಲಿ ಮಹಿಳೆಯರೇ ತಯಾರಿಸಿದ ಆಹಾರ ಪದಾರ್ಥ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಹಿಳೆಯರ ವ್ಯಾಪಾರಿಕರಣಕ್ಕೆ ಪ್ರೋತ್ಸಾಹ ನೀಡಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶ್ರೀಕಂಠಮೂರ್ತಿ, ಜಿಲ್ಲಾ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಹೊನ್ನೆಗೌಡ, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ಪರಿಶಿಷ್ಟ ವರ್ಗ ಕಲ್ಯಾಣ ಅಧಿಕಾರಿ ಗುರುಶಾಂತಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ರಾಜೇಶ್, ತಿತಿಮತಿ ಗ್ರಾ.ಪಂ. ಅಧ್ಯಕ್ಷೆ ಆಶಾ, ಉಪಾಧ್ಯಕ್ಷೆ ವಿಜಯ, ತಾಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರಜಿನಿ ಹಾಗೂ ಸ್ಥಳೀಯ ಗ್ರಾ.ಪಂ. ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.