ವೀರಾಜಪೇಟೆ, ಮಾ. ೨೯: ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ನಿರಂತರವಾಗಿ ವನ್ಯಜೀವಿ ಮಾನವ ಸಂಘರ್ಷದಿAದಾಗಿ ಸಾವು-ನೋವುಗಳು ಸಂಭವಿಸಿದ್ದರೂ ರಾಜ್ಯ ಸರ್ಕಾರವು ಯಾವುದೇ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್ ಈ ಕೂಡಲೇ ಅರಣ್ಯ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದೆ.
ಜಿಲ್ಲಾ ಕಾಂಗ್ರೆಸ್ ಮತ್ತು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ, ರುದ್ರಗುಪ್ಪೆ ಗ್ರಾಮದಲ್ಲಿ ಕಾರ್ಮಿಕ ಗಣೇಶ್ ಎಂಬವರ ಮೇಲೆ ಹುಲಿಯೊಂದು ದಾಳಿ ನಡೆಸಿ ಬಲಿತೆಗೆದುಕೊಂಡಿದ್ದು, ಈ ಘಟನೆಯಿಂದ ಜನರಲ್ಲಿ ಹಾಗೂ ಬೆಳೆಗಾರರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ನಿರಂತರವಾಗಿ ವ್ಯಾಘ್ರನ ಹಾವಳಿಯಿಂದಾಗಿ ಜಾನುವಾರುಗಳನ್ನು ಸಾಕುವುದು ಮತ್ತು ಜನಸಾಮಾನ್ಯರು ನಡೆದಾಡುವುದು ಅಸಾಧ್ಯವೆನಿಸಿದೆ. ಗ್ರಾಮೀಣ ಭಾಗದ ಜನತೆ ಹಲವು ಬಾರಿ ಹುಲಿ ದಾಳಿಗೆ ಕಡಿವಾಣ ಹಾಕುವಂತೆ ಇಲಾಖೆಗಳು, ಶಾಸಕರು ಮತ್ತು ಸಂಸದರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಜಿಲ್ಲೆಯಲ್ಲಿ ಕಾರ್ಮಿಕ ಮತ್ತು ಬೆಳೆಗಾರರ ಸಂಕಷ್ಟಕ್ಕೆ ಧ್ವನಿಯಾಗಿ ರಾಜ್ಯ ರೈತ ಸಂಘ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದೆ. ರೈತ ಸಂಘದ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ಸೂಚಿಸುತ್ತದೆ. ವನ್ಯಜೀವಿಗಳಿಂದ ದಾಳಿಗೊಳಗಾದ ವ್ಯಕ್ತಿಗಳಿಗೆ ಏಳು ಲಕ್ಷ ಪರಿಹಾರ; ಇಲಾಖೆಯ ಅಧಿಕಾರಿಗಳು ಸತ್ತರೇ ಇಪ್ಪತೈದು ಲಕ್ಷ ಪರಿಹಾರ ಇದು ರಾಜ್ಯ ಸರ್ಕಾರದ ತಾರತಮ್ಯ ನೀತಿಯಾಗಿದೆ ಎಂದು ಆರೋಪಿಸಿದ ಧರ್ಮಜ ಉತ್ತಪ್ಪ, ಸರ್ವರಿಗೂ ಒಂದೇ ರೀತಿಯ ಪರಿಹಾರ ನೀಡುವಂತಾಗಬೇಕು ಎಂದು ಒತ್ತಾಯಿಸಿದರು. ಹುಲಿ ದಾಳಿಯಿಂದ ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಮೃತನ ಪತ್ನಿಗೆ ಸರ್ಕಾರಿ ನೌಕರಿ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡುತ್ತೇವೆ ಎಂದÀÄ ಹೇಳಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ವನ್ಯಜೀವಿಗಳ ಉಪಟಳ ತಾರಕಕ್ಕೇರಿದೆ. ಕಾಡಾನೆ ದಾಳಿ ಮತ್ತು ಹುಲಿ ದಾಳಿಯಿಂದಾಗಿ ಜಿಲ್ಲೆಯ ಜನತೆ ಕಂಗಾಲಾಗಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರವಿದ್ದರೂ ಜಿಲ್ಲೆಯಲ್ಲಿ ನಡೆಯುತ್ತಿರುವ ವನ್ಯಜೀವಿ ಮಾನವ ಸಂಘರ್ಷವನ್ನು ಕೊನೆಗಾಣಿಸುವಲ್ಲಿ ವಿಫಲವಾಗಿವೆ.
ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಅವರು ಸದನದಲ್ಲಿ ವನ್ಯಜೀವಿ ಮಾನವ ಸಂಘರ್ಷದ ಬಗ್ಗೆ ಮಾತನಾಡದೆ ಮೌನಕ್ಕೆ ಶರಣಾಗಿರುವುದು ವಿಷಾದನೀಯ. ಸಂಸದರು ದಾಳಿಗೆ ಒಳಗಾದ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವನ ಹೇಳಲು ಬಾರದಿರುವುದು ಸರಿಯಲ್ಲ. ರಾಜ್ಯ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸದಿರುವುದು ಖಂಡನೀಯ. ಅರಣ್ಯ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಕ್ಷದ ವತಿಯಿಂದ ಒತ್ತಾಯ ಮಾಡುತ್ತಿದ್ದೇವೆ ಎಂದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ, ಸರಕಾರಗಳು ಜಿಲ್ಲೆಯ ಕಾಫಿ ಬೆಳೆಗಾರರ ಮತ್ತು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಸಂಬAಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣವೇ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕೆAದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾನಂಡ ಪ್ರಥ್ವಿ, ಪಟ್ಟಣ ಪಂಚಾಯಿತಿ ಸದಸ್ಯ ರಾಜೇಶ್ ಪದ್ಮನಾಭ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಹಾಜರಿದ್ದರು.