ಮಡಿಕೇರಿ, ಮಾ. ೨೯: ಹುಲಿ ದಾಳಿಗೆ ಸಿಲುಕಿ ನಿನ್ನೆ ಒಂದನೇ ರುದ್ರಗುಪ್ಪೆ ಗ್ರಾಮದಲ್ಲಿ ಬಲಿಯಾದ ಕಾರ್ಮಿಕ ಗಣೇಶ್ (ಪುಟ್ಟು) ಸಾವಿನ ಘಟನೆಯ ಗಂಭೀರತೆ ಇಂದು ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿತು.
ಈ ಗಂಭೀರ ಪ್ರಕರಣದ ಕುರಿತಾಗಿ ಸದಸ್ಯೆ ವೀಣಾ ಅಚ್ಚಯ್ಯ ಅವರು ಚರ್ಚೆಗೆ ಅವಕಾಶ ಕೋರಿದ ಹಿನ್ನೆಲೆಯಲ್ಲಿ ಈ ಬಗ್ಗೆ ಕಲಾಪದಲ್ಲಿ ಚರ್ಚೆ ನಡೆಯಿತು.
ವಿಷಯ ಪ್ರಸ್ತಾಪಿಸಿದ ವೀಣಾ ಅಚ್ಚಯ್ಯ ಅವರು, ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ದಾಳಿ ಬಗ್ಗೆ ಗಮನ ಸೆಳೆದು ನಿನ್ನೆ ನಡೆದ ಘಟನೆಯ ಬಗ್ಗೆ ವಿವರಿಸಿದರು. ಕಳೆದ ವರ್ಷವೂ ಮೂವರು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಇದೀಗ ಮತ್ತೆ ಮರುಕಳಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆನೆ ದಾಳಿಯಿಂದಲೂ ಜನರು ಬಲಿಯಾಗುತ್ತಿದ್ದಾರೆ. ಹುಲಿ ದಾಳಿಯಿಂದಲೂ ಭಯದ ವಾತಾವರಣ ಸೃಷ್ಟಿಯಾಗಿದ್ದು,
(ಮೊದಲ ಪುಟದಿಂದ) ಜಿಲ್ಲೆಯನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಆಕ್ಷೇಪಿಸಿದರು.
ವೀರಾಜಪೇಟೆ ಡಿಎಫ್‌ಓ ಚಕ್ರಪಾಣಿ ಅವರ ಬಗ್ಗೆ ನೇರ ಆಪಾದನೆ ಮಾಡಿದ ವೀಣಾ ಅವರು, ಅವರ ವಿರುದ್ಧ ಜನತೆ ಆಕ್ರೋಶ ಗೊಂಡಿದ್ದಾರೆ. ಅವರನ್ನು ವರ್ಗಾಯಿ ಸಬೇಕೆಂದು ಒತ್ತಾಯಿಸಿದರು.
ಹುಲಿಗಳ ಸಂತತಿ ವೃದ್ಧಿಗೆ ಕೊಡಗು ಉತ್ತಮ ತಾಣ ಎಂಬ ಹಿನ್ನೆಲೆಯಲ್ಲಿ ಹುಲಿಗಳನ್ನು ಇಲ್ಲಿ ಬಿಡಲಾಗುತ್ತಿದೆ ಎಂಬ ಸಂಶಯ ಜನರಲ್ಲಿದೆ. ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಮಂಗಗಳ ಹಾವಳಿಯೂ ಹೆಚ್ಚಾಗಿದ್ದು, ರಸ್ತೆ ಬದಿಯಲ್ಲೇ ಕಂಡುಬರುತ್ತಿದೆ ಎಂದು ಗಮನ ಸೆಳೆದರಲ್ಲದೆ, ಇವುಗಳನ್ನೂ ತಂದು ಬಿಡುತ್ತಿರುವ ಸಂಶಯ ಇದೆ ಎಂದರು. ವನ್ಯ ಪ್ರಾಣಿಗಳ ತಡೆಗೆ ಸರಕಾರ ಕ್ರಮಕೈಗೊಳ್ಳಲೇ ಬೇಕೆಂದು ಅವರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ವೀಣಾ ಅವರು ಇತ್ತೀಚೆಗೆ ಈ ವಿಚಾರ ಪ್ರಸ್ತಾಪಿಸಿದ್ದು, ಅರಣ್ಯ ಸಚಿವರು ಜಿಲ್ಲೆಗೆ ಭೇಟಿ ನೀಡುವ ಭರವಸೆ ನೀಡಿದ್ದರು. ಇದರ ನಡುವೆಯೇ ಮತ್ತೆ ಹುಲಿ ದಾಳಿ ನಡೆದಿದೆ. ಈ ಬಗ್ಗೆ ಮತ್ತೆ ಅರಣ್ಯ ಸಚಿವರಿಗೆ ಈ ಬಗ್ಗೆ ತಿಳಿಸಿ ತ್ವರಿತ ಕ್ರಮಕ್ಕೆ ಸರಕಾರದ ಪರವಾಗಿ ಮಾಹಿತಿ ಒದಗಿಸುವುದಾಗಿ ತಿಳಿಸಿದರು.
ಡಿ.ಎಫ್.ಓ. ಚಕ್ರಪಾಣಿ ಅವರ ಕಾರ್ಯವೈಖರಿ ಬಗ್ಗೆ ಹಲವಾರು ದೂರುಗಳಿವೆ. ಈ ಬಗ್ಗೆಯೂ ತನಿಖೆ ನಡೆಸಲು ಸೂಚನೆ ನೀಡುವುದಾಗಿ ತಿಳಿಸಿದರು.