ಮಡಿಕೇರಿ, ಮಾ. ೨೯: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾನವ- ವನ್ಯ ಜೀವಿ ಸಂಘರ್ಷ ತಡೆಗೆ ಶಾಶ್ವತ ಕ್ರಮ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಏ. ೮ ರಂದು ಅರಣ್ಯ ಸಚಿವರ ನೇತೃತ್ವದಲ್ಲಿ ಸಭೆ ನಡೆಸುವ ಚಿಂತನೆ ಇದೆ ಎಂದು ಜಿಲ್ಲಾಧಿಕಾರಿ ಬಿ.ಸಿ. ಸತೀಶ ಅವರು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವನ್ಯಜೀವಿ-ಮಾನವ ಸಂಘರ್ಷ ತಡೆ ಸಂಬAಧ ಈಗಾಗಲೇ ರಾಜ್ಯಮಟ್ಟದಲ್ಲಿ ಒಂದು ಸಭೆ ನಡೆದು ಕೆಲವೊಂದು ಪರಿಹಾರ ಕ್ರಮದ ಬಗ್ಗೆ ಚರ್ಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸಭೆ ನಡೆಯಬೇಕಾಗಿದ್ದು, ಏ. ೮ ರಂದು ಕಾರ್ಯಕ್ರಮವೊಂದರ ಸಲುವಾಗಿ ಅರಣ್ಯ ಸಚಿವರು ಮಡಿಕೇರಿಗೆ ಆಗಮಿಸಲಿದ್ದಾರೆ. ಅಂದು ಸಭೆ ನಡೆಸುವ ಸಾಧ್ಯತೆ ಇದೆ ಎಂದರು.
ದಕ್ಷಿಣ ಕೊಡಗಿನಲ್ಲಿ ಜನ-ಜಾನುವಾರುಗಳ ಸಾವು ನೋವಿಗೆ ಕಾರಣವಾಗಿರುವ ಹುಲಿಯನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ. ಆದರೆ, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಈ ಬಗ್ಗೆ ನಿರ್ಧರಿಸಬೇಕು. ಬಿ.ಶೆಟ್ಟಿಗೇರಿಯಲ್ಲಿ ನಡೆದ ಪ್ರಕರಣದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಅಲ್ಲಿನ ಘಟನೆ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ, ಪರಿಶೀಲನೆ ನಡೆಸುತ್ತೇನೆ. ಈ ಘಟನಾವಳಿಗಳಿಂದ ಕೃಷಿ ಚಟುವಟಿಕೆಗಳಿಗೂ ಹಿನ್ನೆಡೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.