ಗೋಣಿಕೊಪ್ಪ ವರದಿ, ಮಾ. ೨೭: ಪೊನ್ನಂಪೇಟೆ ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಲಿಜ ಸಮಾಜ ಸಹಯೋಗದಲ್ಲಿ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯ ಅವರ ೨೯೬ನೇ ಜಯಂತಿಯನ್ನು ಕಾಮತ್ ನವಮಿ ಸಭಾಂಗಣದಲ್ಲಿ ಭಾನುವಾರ ಆಚರಿಸಲಾಯಿತು.

ಶ್ರೀ ಯೋಗಿ ನಾರೇಯಣ ತಾತಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕಪ್ಪು ಬಳೆ ಇಟ್ಟು ಗೌರವ ನೀಡಲಾಯಿತು. ಅವರ ಜೀವನ ಚರಿತ್ರೆಯನ್ನು ಬಲಿಜ ಸಮಾಜ ಪ್ರ. ಕಾರ್ಯದರ್ಶಿ ಗೀತಾ ನಾಯ್ಡು ತಿಳಿಸಿಕೊಟ್ಟರು.

ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಎನ್.ಎಸ್. ಪ್ರಶಾಂತ್ ಮಾತನಾಡಿ, ಆಚರಣೆ ಒಂದು ದಿನಕ್ಕೆ ಸೀಮತವಾಗಬಾರದು. ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯ ಅವರ ಜೀವನ ಕ್ರಮ, ಸಮಾಜಕ್ಕಾಗಿ ಅವರು ನೀಡಿದ ಕಾಣಿಕೆಯನ್ನು ಮೆಲುಕು ಹಾಕುವಂತ ಕಾರ್ಯ ಸಮಾಜದಲ್ಲಿ ನಡೆಯಬೇಕಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಡಾ. ಜೆ ಸೋಮಣ್ಣ ಮಾತನಾಡಿ, ತಾತಯ್ಯ ಬಳೆ ಮಾರಾಟವನ್ನು ಕಾಯಕವನ್ನಾಗಿ ರೂಪಿಸಿಕೊಂಡಿದ್ದರು. ಅವರವರ ಕಾಯಕಕ್ಕೆ ಗೌರವ ನೀಡುವುದರಿಂದ ದೇಶದ ಬಹುತ್ವದ ಸಂಸ್ಕೃತಿ ಪೋಷಣೆಗೆ ಸಹಕಾರಿಯಾಗಲಿದೆ. ಇವರನ್ನು ಒಂದು ಜನಾಂಗಕ್ಕೆ ಸೀಮಿತವಾಗಿ ನೋಡದೇ, ಎಲ್ಲರಿಗೂ ಇವರ ಆದರ್ಶಗಳನ್ನು ತಿಳಿಸುವ ಪ್ರಯತ್ನ ಮಾಡಬೇಕಿದೆ ಎಂದರು. ಆಡಳಿತ ವರ್ಗ ಸಮಾಜದ ಆಸ್ತಿ ಎಂದು ಬಿಂಬಿಸಬೇಕಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಬಳೆ ಮಾರಾಟ ವೃತ್ತಿ ಶ್ರೇಷ್ಠತೆಯಿಂದ ಕೂಡಿದೆ. ಒಂದಷ್ಟು ಸಂಬAಧಗಳನ್ನು ಒಂದು ಗೂಡಿಸುವ ಕಾರ್ಯ ಕೂಡ ನಡೆಯುತ್ತಿದೆ ಎಂದರು.

ಈ ಸಂದರ್ಭ ಬಲಿಜ ಸಮಾಜ ಜಿಲ್ಲಾಧ್ಯಕ್ಷ ಟಿ.ಎಲ್. ಶ್ರೀನಿವಾಸ್, ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ತಾಲೂಕು ಅಧ್ಯಕ್ಷ ಗಿರೀಶ್ ಗಣಪತಿ, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಚೈತ್ರ ಬಿ. ಚೇತನ್, ಸದಸ್ಯ ವಿವೇಕ್ ರೈ, ಬಿಜೆಪಿ ರಾಜ್ಯ ಕಾರ್ಯಕರಿಣಿ ಸದಸ್ಯೆ ಯಮುನಾ ಚೆಂಗಪ್ಪ, ಸಾಮಾಜಿಕ ಕಾರ್ಯಕರ್ತರಾದ ಕಂದಾ ದೇವಯ್ಯ, ಪಡಿಕಲ್ ಕುಸುಮಾವತಿ, ಸಮಾಜದ ಪ್ರಮುಖರಾದ ಟಿ.ಆರ್. ಗಣೇಶ್, ಬಿ.ಎಂ. ವಿಜಯ ಇದ್ದರು.