*ಸಿದ್ದಾಪುರ, ಮಾ.೨೭ : ಅಭ್ಯತ್ ಮಂಗಲದಲ್ಲಿ ಕಾಡಾನೆಗಳ ದಾಂಧಲೆ ಮಿತಿ ಮೀರಿದ್ದು, ಭತ್ತ ಬೆಳೆ ಮತ್ತು ಕಾಫಿ ಹೂವುಗಳು ನಷ್ಟವಾಗಿದೆ.

ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಸ್ಥಳೀಯ ಕೃಷಿಕ ಅಂಚೆಮನೆ ಸುಧಾಕರ್ ಎಂಬವರ ಗದ್ದೆಗೆ ಲಗ್ಗೆ ಇಟ್ಟ ಕಾಡಾನೆಗಳು ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಹೈನುಗಾರಿಕೆಯಲ್ಲಿ ತೊಡಗಿರುವ ಇವರು ಹಸುಗಳಿಗೆ ಆಹಾರಕ್ಕಾಗಿ ಬೆಳೆ ಬೆಳೆದಿದ್ದರು. ಆದರೆ ಇವುಗಳು ಕಾಡಾನೆ ಹೊಟ್ಟೆ ಸೇರಿದ್ದು, ಅಪಾರ ನಷ್ಟ ಉಂಟಾಗಿದೆ.ಅರಣ್ಯ ಸಿಬ್ಬಂದಿಗಳು ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸುವ ಸಂದರ್ಭ ಕಾಫಿ ತೋಟಗಳಿಗೆ ಹಾನಿಯಾಗುತ್ತಿದೆ. ಭವಿಷ್ಯದ ಫಸಲಿನ ಕಾಫಿ ಹೂವುಗಳು ನೆಲಕಚ್ಚುತ್ತಿವೆ. ಗದ್ದೆ ಮತ್ತು ತೋಟಗಳು ಕಾಡಾನೆಗಳ ದಾಳಿಗೆ ಸಿಲುಕುತ್ತಿರುವುದರಿಂದ ಬೆಳೆಗಾರರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಮತ್ತು ಕಾಡಾನೆಗಳ ಉಪಟಳ ತಡೆಯಲು ಶಾಶ್ವತ ಯೋಜನೆ ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ಸುಧಿ