ಸೋಮವಾರಪೇಟೆ, ಮಾ.೨೬: ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸೋಮವಾರಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಹಾರಂಗಿ ನೀರು ಯೋಜನೆ ಜಾರಿಯಾಗಿದ್ದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬ ವಿಚಾರದ ಬಗ್ಗೆ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.

ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ಪ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಉಪಾಧ್ಯಕ್ಷ ಬಿ. ಸಂಜೀವ, ಹಾರಂಗಿಯಿAದ ವರ್ಷದ ೩೬೫ ದಿನದಲ್ಲಿ ೩೦ ದಿನವೂ ಪಟ್ಟಣಕ್ಕೆ ನೀರು ಬರುತ್ತಿಲ್ಲ. ಆದರೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಮೋಟಾರ್ ರಿಪೇರಿ, ವಿದ್ಯುತ್, ಕಾರ್ಮಿಕರ ವೇತನಕ್ಕೆ ವಿನಿಯೋಗಿಸಲಾಗುತ್ತಿದೆ. ಇಂತಹ ಯೋಜನೆ ಅವಶ್ಯವಿದೆಯೇ? ಎಂದು ಪ್ರಶ್ನಿಸಿದರು.

ಯೋಜನೆಯಲ್ಲಿ ಕೆಲಸ ಮಾಡುತ್ತಿ ರುವ ಸಿಬ್ಬಂದಿಗಳನ್ನು ಬದಲಾಯಿಸ ಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದು, ಈ ವಿಷಯವನ್ನು ಶಾಸಕರ ಗಮನಕ್ಕೆ ತಂದು ಹಾರಂಗಿ ಯೋಜನೆಯನ್ನು ಸ್ಥಗಿತಗೊಳಿಸಿ ದುದ್ದುಗಲ್ಲಿನಿಂದ ನೀರು ತರಲು ಯೋಜನೆ ರೂಪಿಸುವಂತೆ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಭವಿಷ್ಯತ್ತಿನ ದೃಷ್ಟಿಯಿಂದ ಯೋಜನೆಯನ್ನು ಕೈಬಿಡುವುದು ಸೂಕ್ತವಲ್ಲ. ಇರುವ ಯೋಜನೆಯನ್ನು ಸುಧಾರಿಸಲು ಕ್ರಮವಹಿಸಲಾಗುವುದು ಎಂದರು. ಎಸ್.ಎಫ್.ಸಿ. ಕುಡಿಯುವ ನೀರು ಯೋಜನೆಯಡಿ ರೂ. ೨.೫೦ಲಕ್ಷ ಅನುದಾನ ಬಿಡುಗಡೆ ಯಾಗಿದ್ದು, ಇದಕ್ಕೆ ಕ್ರಿಯಾ ಯೋಜನೆ ತಯಾರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ವೆಂಕಟೇಶ್ವರ ಬ್ಲಾಕ್ ನಲ್ಲಿರುವ ನೀರು ಟ್ಯಾಂಕ್ ಗೆ ಪೈಪ್ ಲೈನ್ ಅಳವಡಿಸಲು ಕ್ರಮಕೈಗೊಳ್ಳಬೇಕೆಂದು ಸದಸ್ಯೆ ಮೋಹಿನಿ ಸಭೆಯ ಗಮನಕ್ಕೆ ತಂದರು. ಪಟ್ಟಣದ ಬೀದಿದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲ. ನೂತನ ಬಲ್ಬ್ ಹಾಕಿದ ಎರಡು ದಿನದಲ್ಲೇ ಕೆಟ್ಟುಹೋಗುತ್ತಿವೆ. ಎಲ್.ಇ.ಡಿ. ಬಲ್ಬ್ ಹಾಕಲು ಕ್ರಮ ಕೈಗೊಳ್ಳಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಅವರು ಮುಖ್ಯಾಧಿಕಾರಿಗೆ ಸೂಚಿಸಿದರು.

ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಅನೇಕ ದಶಕಗಳಿಂದ ಪೌರಕಾರ್ಮಿಕ ರಾಗಿ ಕೆಲಸ ಮಾಡುತ್ತಿರುವ ೧೧ ಮಂದಿಗೆ ನಿವೇಶನ ನೀಡಲು ಸಭೆ ತೀರ್ಮಾನಿಸಿತು. ಇವರುಗಳಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸು ವುದು, ಈಗಾಗಲೇ ಜಾಗ ಹೊಂದಿದ್ದರೆ ಸಾರ್ವಜನಿಕ ಆಕ್ಷೇಪಣೆ ಸ್ವೀಕರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಪಟ್ಟಣದ ಅನೇಕ ಕಡೆಗಳಲ್ಲಿ ರಸ್ತೆಬದಿಯಲ್ಲಿಯೇ ವಿದ್ಯುತ್ ಕಂಬಗಳಿದ್ದು ತೆರವುಗೊಳಿಸುವಂತೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆಯಿಲ್ಲ ಎಂದು ಸದಸ್ಯ ಜೀವನ್ ಹೇಳಿದರು. ಈ ಬಗ್ಗೆ ಕೆಇಬಿಗೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ ಎಂದು ಅಧ್ಯಕ್ಷ ಪಿ.ಕೆ. ಚಂದ್ರು, ಮುಖ್ಯಾಧಿಕಾರಿ ನಾಚಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.

ಸಾರ್ವಜನಿಕ ರಸ್ತೆ ಹಾಗೂ ಮನೆಯ ಮುಂಭಾಗದಲ್ಲಿ ಕಂಬ ಅಳವಡಿಸಿರುವ ಪ್ರಕರಣಗಳಿಗೆ ಸಂಬAಧಿಸಿದAತೆ ವಕೀಲರಿಂದ ಸೆಸ್ಕಾಂ ಗೆ ನೋಟೀಸ್ ನೀಡಲು ಸಭೆ ತೀರ್ಮಾನಿಸಿತು. ಈಗಾಗಲೇ ಟೆಂಡರ್ ಆಗಿರುವ ಹಲವಷ್ಟು ಮಳಿಗೆಗಳು ದುರಸ್ತಿಗೀಡಾಗಿದ್ದು, ತಕ್ಷಣ ಸರಿಪಡಿಸಿ ನಂತರ ಟೆಂಡರ್ ದಾರರಿಗೆ ಹಸ್ತಾಂತರಿಸುವAತೆ ಉಪಾಧ್ಯಕ್ಷ ಸಂಜೀವ, ಸದಸ್ಯ ಜೀವನ್ ಹೇಳಿದರು.

ಪಂಚಾಯಿತಿಯಲ್ಲಿ ಇಂಜಿನಿಯರ್ ಇಲ್ಲ; ಅಧಿಕಾರಿಗಳೂ ಇಲ್ಲ. ಈ ಹಿಂದೆ ಉತ್ತಮವಾಗಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಅವರನ್ನು ನಾಮನಿರ್ದೇಶಿತ ಕೆಲ ಸದಸ್ಯರು ಒತ್ತಡ ಹಾಕಿ ವರ್ಗಾವಣೆ ಮಾಡಿದ್ದಾರೆ. ಈಗ ನಾಮನಿರ್ದೇಶನ ಸದಸ್ಯರು ಇದ್ದಾರಾ? ಪಂಚಾಯಿತಿ ಕೆಲಸ ಮಾಡೋದು ಯಾರು? ಎಂದು ಸಂಜೀವ ಪ್ರಶ್ನಿಸಿದರಲ್ಲದೆ, ಇಂಜಿನಿಯರ್‌ರನ್ನು ಉಳಿಸಿಕೊಳ್ಳು ವಂತೆ ಶಾಸಕರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನಗೊಂಡರು.

ಅಧಿಕಾರಿಗಳು ಕಚೇರಿಯಲ್ಲಿ ಇಲ್ಲ ಎಂದರೆ ಚುನಾಯಿತ ಸದಸ್ಯರಾದ ನಾವುಗಳು ಸಭೆ ಮಾಡೋದಾದರೂ ಯಾಕೆ? ಈ ಬಗ್ಗೆ ಗಂಭೀರ ಚಿಂತನೆ ನಡೆಸಿ, ಮುಂದಿನ ಸಭೆಗಳಿಗೆ ನಾವು ಬರಬೇಕೋ ಬೇಡವೋ ಎಂದು ತೀರ್ಮಾನಿಸಬೇಕಾಗುತ್ತದೆ ಎಂದು ಜೀವನ್ ಹೇಳಿದರು. ನಗರಸಭೆಯಿಂದ ಸದ್ಯದಲ್ಲಿಯೇ ಇಂಜಿನಿಯರ್‌ನ್ನು ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ನಗರೋತ್ಥಾನ ಯೋಜನೆಯಡಿ ಅನುದಾನ ಬಂದಿದ್ದರೂ ಕ್ರಿಯಾಯೋಜನೆ ತಯಾರಿಸಿಲ್ಲ. ಅನುದಾನ ವಾಪಸ್ ಹೋದರೆ ಯಾರು ಹೊಣೆ? ಹಿಂದಿನ ಇಂಜಿನಿಯರ್ ಅವರನ್ನು ವರ್ಗಾವಣೆ ಮಾಡಿಸಿದ ನಾಮನಿರ್ದೇಶನ ಸದಸ್ಯರು ಹೊಣೆ ಹೊರುತ್ತಾರಾ? ಎಂದು ಸಂಜೀವ ಪ್ರಶ್ನಿಸಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಕ್ಕೆಹೊಳೆ ಜಂಕ್ಷನ್ ನಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣಕ್ಕೆ ಪಂಚಾಯಿತಿ ಸದಸ್ಯರ ಹೆಸರುಗಳಿರುವ ನಾಮಫಲಕ ಅಳವಡಿಸುವಂತೆ ತೀರ್ಮಾನಿಸಲಾಯಿತು.

ಈ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭ ಎದ್ದು ನಿಂತ ಉಪಾಧ್ಯಕ್ಷ ಸಂಜೀವ ಅವರು, ಬಸ್ ನಿಲ್ದಾಣದಲ್ಲಿ ನಾಮನಿರ್ದೇಶನ ಸದಸ್ಯ ಎಸ್.ಆರ್. ಸೋಮೇಶ್ ಅವರ ಹೆಸರನ್ನು ಪಟ್ಟಣ ಪಂಚಾಯಿತಿ ಸದಸ್ಯ ಎಂದು ಹಾಕಲಾಗಿದೆ. ಅವರು ಯಾವ ಪಟ್ಟಣದ ಸದಸ್ಯ ಎಂಬುದನ್ನು ಬಹಿರಂಗಪಡಿಸಬೇಕು ಎಂದರು. ಅಧ್ಯಕ್ಷ ಚಂದ್ರು ಹಾಗೂ ಮುಖ್ಯಾಧಿಕಾರಿ ನಾಚಪ್ಪ ಅವರು ಈ ಸಂದರ್ಭ ಇಕ್ಕಟ್ಟಿಗೆ ಸಿಲುಕಿದರು. ಈ ಬಗ್ಗೆ ಒಂದಿಷ್ಟು ಚರ್ಚೆ ನಡೆದು ಅಂತಿಮವಾಗಿ ನಾಮಫಲಕ ಗೊಂದಲವನ್ನು ಸರಿಪಡಿಸುವಂತೆ ತೀರ್ಮಾನಿಸಲಾಯಿತು.

ಪಟ್ಟಣದಲ್ಲಿ ಹುತಾತ್ಮ ಯೋಧರ ಅಮರ್ ಜವಾನ್ ಸ್ಮಾರಕ ನಿರ್ಮಿಸಲು ಮಾಜೀ ಸೈನಿಕರ ಸಂಘ ಅನುಮತಿ ಕೋರಿದ್ದು, ಈ ಬಗ್ಗೆ ಸ್ಥಳ ಪರಿಶೀಲಿಸಲು ತೀರ್ಮಾನಿಸಲಾ ಯಿತು. ಆಟೋ ಚಾಲಕರ ಸಂಘದ ಕಚೇರಿ ನಿರ್ಮಾಣ, ಜಿಲ್ಲಾ ಮೊಗೇರ ಸಮಾಜದಿಂದ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಕೋರಿ ಮನವಿ ಬಂದಿದ್ದು, ಈ ಬಗ್ಗೆ ಕ್ರಮ ವಹಿಸಲು ತೀರ್ಮಾನಿಸಲಾಯಿತು.

ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಪ್ರತಿಮೆಗಳಿಗೆ ಮತ್ತು ಪುಟ್ಟಪ್ಪ ವೃತ್ತ, ಜೇಸೀ ವೇದಿಕೆ ಬಳಿಯ ಹೈ ಮಾಸ್ಟ್ ದೀಪದ ಕೆಳಭಾಗ ಎಸ್.ಎಸ್. ರೇಲಿಂಗ್ಸ್ ಅಳವಡಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಸದಸ್ಯರುಗಳಾದ ವೆಂಕಟೇಶ್, ನಾಗರತ್ನ, ಮೃತ್ಯುಂಜಯ, ಶೀಲಾ ಡಿಸೋಜ, ಶುಭಕರ್, ಬಿ.ಆರ್. ಮಹೇಶ್, ಅಭಿಯಂತರ ವೆಂಕಟೇಶ್ ನಾಯಕ್, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.