ಮಡಿಕೇರಿ, ಮಾ. ೨೬: ಸಂಕಷ್ಟದಲ್ಲಿರುವ ಮತ್ತೊಂದು ಜೀವಿಗೆ ಸ್ಪಂದಿಸುವAಥ ಮನೋಭಾವ ಜಗತ್ತಿನಲ್ಲಿಯೇ ಭಾರತೀಯರಲ್ಲಿ ಆದ್ಯತೆಯಾಗಿ ಕಂಡುಬರುತ್ತದೆ. ಹೀಗಾಗಿಯೇ ಭಾರತ ಮಾನವೀಯತೆ ಯಿಂದ ಕೂಡಿದ ಸಮಾಜಸೇವೆಗೆ ಮತ್ತೊಂದು ಹೆಸರಾಗಿ ಗುರುತಿಸಲ್ಪಟ್ಟಿದೆ ಎಂದು ರೋಟರಿ ಜಿಲ್ಲೆ ೩೧೮೧ ರ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಸತೀಶ್ ಬೊಳಾರ್ ಅಭಿಪ್ರಾಯ ಪಟ್ಟಿದ್ದಾರೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮಡಿಕೇರಿ ರೋಟರಿ ಕ್ಲಬ್ ಸಹಯೋಗದಲ್ಲಿ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಗಾಲಿ ಕುರ್ಚಿ, ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ ಸತೀಶ್ ಬೊಳಾರ್, ರೋಟರಿಯಂತಹ ಸಾಮಾಜಿಕ ಸೇವಾ ಸಂಸ್ಥೆಗಳ ಸದಸ್ಯರ ಮೂಲಕ ವಿಶ್ವದಲ್ಲಿ ಮಾನವ ಸೇವೆ ಅವಿರತವಾಗಿ ನಡೆಯುತ್ತಿರುತ್ತದೆ.

ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಸ್ವಹಿತವನ್ನು ಮೀರಿದ ಸೇವೆಯನ್ನು ರೋಟರಿ ಸಂಸ್ಥೆಗಳು ಕೈಗೊಳ್ಳುತ್ತಾ ಬಂದಿದೆ. ಪ್ರತೀ ವರ್ಷವೂ ಪ್ರತೀ ರೋಟರಿ ಸಂಸ್ಥೆಯೂ ಸಾಮಾಜಿಕ ಸೇವಾ ಕಾರ್ಯಗಳಿಗೆ ಮಹತ್ವದ ಕೊಡುಗೆ ನೀಡುತ್ತಲೇ ಇರುತ್ತದೆ. ಹೀಗಾಗಿ ರೋಟರಿ ಸದಾ ಜನಪರ ಕಾಳಜಿಯುಳ್ಳ ಸಂಸ್ಥೆಯಾಗಿ ಹೆಸರುವಾಸಿಯಾಗಿದೆ ಎಂದರು. ಸೇವೆ ಮತ್ತು ಸ್ನೇಹವನ್ನು ಮುಖ್ಯ ಧ್ಯೇಯವಾಗಿ ಹೊಂದಿರುವ ರೋಟರಿಯು ಕೊಡುವ ಮನಸ್ಸಿನವರು ಹಾಗೂ ಫಲಾನುಭವಿಗಳ ನಡುವೆ ಬೆಸುಗೆಯಾಗಿದೆ ಎಂದು ಹೇಳಿದ ಅನಂತಶಯನ, ಅನೇಕರ ಬಾಳಿನಲ್ಲಿ ಹೊಸತನಕ್ಕೆ ಕಾರಣವಾಗುವ ಸಂಸ್ಥೆಯಾಗಿ ರೋಟರಿ ಗುರುತಿಸಲ್ಪಟ್ಟಿದ್ದು, ಸ್ವಾರ್ಥರಹಿತ ಸೇವೆಗೆ ಮತ್ತೊಂದು ಹೆಸರಾಗಿ ಚಿರಸ್ಥಾಯಿಯಾಗಿದೆ ಎಂದು ಮಾಹಿತಿ ನೀಡಿದರು. ರೋಟರಿ ವಲಯ ೬ ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ಮಾತನಾಡಿ, ೧೧೭ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ರೋಟರಿ ಜಗದಗಲ ವ್ಯಾಪಿಸಿದೆ. ಪೋಲಿಯೋ, ಕೋವಿಡ್, ಪ್ರಕೃತ್ತಿ ವಿಕೋಪ ಮುಂತಾದ ಯಾವುದೇ ಸಂಕಷ್ಟ ಎದುರಾಗಲಿ ರೋಟರಿ ವಿಳಂಭರಹಿತವಾಗಿ ದೇಶದ ಜನತೆಯ ನೆರವಿನ ಸೇವೆಗೆ ಮುಂದಾಗುತ್ತದೆ. ಪ್ರತಿನಿತ್ಯ ಒಬ್ಬರಲ್ಲ ಮತ್ತೊಬ್ಬರು ರೋಟರಿಯಿಂದ ಪ್ರಯೋಜನ ಪಡೆಯುತ್ತಲೇ ಇರುತ್ತಾರೆ. ಆರ್ಥಿಕ ಮೌಲ್ಯಗಳಲ್ಲಿ ರೋಟರಿಯ ಸೇವೆಯನ್ನು ಅಳೆಯುವುದಕ್ಕಿಂತ ಮಾನವೀಯತೆಯ ನೆಲೆಗಟ್ಟಿನಲ್ಲಿ ರೋಟರಿಯ ಸೇವಾ ಬದ್ದತೆಯ ಮೌಲ್ಯಮಾಪನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ರೆಡ್ ಕ್ರಾಸ್ ಕೊಡಗು ಘಟಕದ ಸಭಾಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ, ಮಡಿಕೇರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿದರು. ಮಡಿಕೇರಿ ರೋಟರಿ ಅಧ್ಯಕ್ಷ ನಡಿಕೇರಿಯಂಡ ಅಚ್ಚಯ್ಯ, ಕಾರ್ಯದರ್ಶಿ ಲಲಿತಾ ರಾಘವನ್, ವೇದಿಕೆಯಲ್ಲಿದ್ದರು. ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಆರ್. ರಾಜೇಶ್ ವಂದಿಸಿದರು. ಪಿ. ಸಂದೀಪ್, ಮೋಹನ್ ಪ್ರಭು, ಅಂಬೆಕಲ್ ವಿನೋದ್, ಪ್ರಸಾದ್ ಗೌಡ, ಎಂ. ಧನಂಜಯ, ಪೂವಯ್ಯ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಸತೀಶ್ ಬೊಳಾರ್ ಅವರನ್ನೂ ಮಿಸ್ಟಿ ಹಿಲ್ಸ್ ವತಿಯಿಂದ ಗೌರವಿಸಲಾಯಿತು.