ಶನಿವಾರಸಂತೆ, ಮಾ. ೨೬: ಪಟ್ಟಣದ ಮುಖ್ಯರಸ್ತೆಯಲ್ಲಿ ಶ್ರೀರಾಮ ಮಂದಿರದ ಮುಂಭಾಗ ಬೆಳಗ್ಗಿನ ಜಾವ ೨.೩೦ಕ್ಕೆ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದ್ದು, ಜನರು ಭಯಭೀತರಾಗಿದ್ದಾರೆ. ರಾಮ ಮಂದಿರದ ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಬೈಪಾಸ್ ರಸ್ತೆಗಾಗಿ ರಾಮ ಮಂದಿರದ ಬಳಿ ಬಂದಿದ್ದ ಸಲಗ ಆ ಸಮಯದಲ್ಲಿ ಬಂದ ಬೆಂಗಳೂರು - ಶನಿವಾರಸಂತೆ ಸರ್ಕಾರಿ ಬಸ್ ಹಾಗೂ ಇತರ ಖಾಸಗಿ ವಾಹನದ ಲೈಟ್ ಬೆಳಕಿಗೆ ಗಾಬರಿಯಾಗಿ ಮುಂಭಾಗದ ರೀನಾ ವೇಣುಗೋಪಾಲ್ ಎಂಬವರ ಮನೆ ಗೇಟ್ ದಾಟಲು ಧಾವಿಸಿ ಘೀಳಿಟ್ಟು, ಗೇಟ್ ಮುರಿದು ತಡೆಗೋಡೆಗೆ ಹಾನಿ ಮಾಡಿ ಪಕ್ಕದ ಮನೆ ಸಿದ್ದಣ್ಣ ಅವರ ಜಾಗದಲ್ಲಿ ಇಳಿದು ಕಾವೇರಿ ರಸ್ತೆಗಾಗಿ ತೆರಳಿದೆ.
ಶಿಕ್ಷಕಿ ರೀನಾ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ಅವರಿಗೆ ಅರ್ಜಿ ಸಲ್ಲಿಸಿದ್ದು, ಪರಿಶೀಲಿಸಿ ಪರಿಹಾರ ಒದಗಿಸುವಂತೆ ಕೋರಿದ್ದಾರೆ.