ಕುಶಾಲನಗರ, ಮಾ.೨೫: ಕಾವೇರಿ ನದಿ ಹೂಳೆತ್ತುವ ಮತ್ತು ಗಿಡಗಂಟಿಗಳನ್ನು ತೆರವು ಮಾಡುವ ಮೂರನೇ ಹಂತದ ಕಾಮಗಾರಿ ತಾ. ೨೭ರಂದು ಕುಶಾಲನಗರ ಸಮೀಪದ ಮಾದಪಟ್ಟಣ ಬಳಿ ನಡೆಯಲಿದೆ.

ಕಾವೇರಿ ನಿಸರ್ಗಧಾಮದ ಕೆಳಭಾಗದ ನದಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯಲಿದೆ. ಮಳೆಗಾಲದ ಅವಧಿಯಲ್ಲಿ ಪ್ರವಾಹ ಬಂದು ನದಿ ತಟದ ಮನೆಗಳು ಅಂಗಡಿ-ಮುAಗಟ್ಟುಗಳು ಸೇರಿದಂತೆ ಮುಖ್ಯರಸ್ತೆಗೆ ನೀರು ತುಂಬಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ವತಿಯಿಂದ ಕ್ಷೇತ್ರ ಶಾಸಕರಾದ ಎಂ.ಪಿ ಅಪ್ಪಚ್ಚುರಂಜನ್ ಮತ್ತು ಜಿಲ್ಲಾಧಿಕಾರಿಗಳಿಗೆ ನದಿ ನಿರ್ವಹಣೆಗೆ ಮನವಿ ಸಲ್ಲಿಸಲಾಗಿತ್ತು.

ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಅವರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಂದಾಜು ರೂ.೫೦ ಲಕ್ಷ ವೆಚ್ಚದಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ನಡೆಯುವ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ತಾ. ೨೭ ರಂದು ಚಾಲನೆ ನೀಡಲಿದ್ದಾರೆ.