ಶನಿವಾರಸಂತೆ, ಮಾ. ೨೪: ಕರ್ತವ್ಯದಲ್ಲಿ ಶ್ರದ್ಧೆ ಇಟ್ಟು ದುಡಿದರೇ ಕೃಷಿಕ ಮಾಡುವ ಭೂತಾಯಿ ಹಾಗೂ ಗೋ ಸೇವೆ ನೈಜತೆಯಿಂದ ಕೂಡಿ ನಿಷ್ಕಲ್ಮಶ ಮನಸ್ಸಿನದಾಗಿ ಉತ್ತಮ ಪ್ರತಿಫಲ ಪಡೆಯಬಹುದು ಎಂದು ಮಾದ್ರೆ ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ ಶ್ರೀಬಿಲ್ವ ಗೋಶಾಲೆ ದಶಮಾನೋತ್ಸವ ನಿಮಿತ್ತ ರಾಜ್ಯಮಟ್ಟದ ಸಾವಯವ ಕೃಷಿ ಮತ್ತು ಕುಲ ಗೋವುಗಳ ಸಮ್ಮೇಳನ ಪ್ರಯುಕ್ತ ನಡೆದ ಸಾವಯವ ಕೃಷಿ, ಕುಲಗೋವುಗಳ ಮಹತ್ವ ಮತ್ತು ಗವ್ಯೋತ್ಪನ್ನಗಳ ಪ್ರಾತ್ಯಕ್ಷಿಕೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಗೋಮಾತೆಗೆ ಗೌರವ ಕೊಡುವ ಮಾನವ ಅಮೃತ ಸಮಾನ. ಹಾಲು ಕೊಡುವ ಗೋವನ್ನು ಕಡೆಗಣಿ ಸಬಾರದು. ಹಸು ನಿಷ್ಪçಯೋಜಕವಲ್ಲ; ಪೂಜನೀಯವಾಗಿದ್ದು, ಹಾಲು,, ಗೋಮೂತ್ರ, ಸಗಣಿ ಎಲ್ಲವೂ ಪ್ರಯೋಜನದಾಯಕ. ಸಗಣಿಯ ಪವಿತ್ರ ವಿಭೂತಿ ಬಳಕೆಯಿಂದ ಚರ್ಮದ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಮಧುಗಿರಿಯ ಪ್ರಾಂತೀಯ ಗೋಸೇವಾ ಪ್ರಮುಖ ಮಧುಸೂಧನ್ ಮಾತನಾಡಿ, ಭಾರತೀಯ ಗೋವಿನಲ್ಲಿ ಔಷಧೀಯ ಗುಣಗಳಿವೆ. ಹಾಲಿನ ಗಣನೆ ಮುಖ್ಯವಲ್ಲ. ಗೋವಿನ ತುಲನೆ ಮುಖ್ಯ. ಹಸುವಿನ ರೋಮ, ಸ್ಪರ್ಷಕ್ಕೂ ಶಕ್ತಿಯಿದೆ. ಹಸುವಿನ ಉಸಿರು ಸಹ ಔಷಧಿ ಗುಣ ಹೊಂದಿದ್ದು, ಬಂಜೆತನ ನಿವಾರಿಸುತ್ತದೆ. ಬಂಜೆತನ ನಿವಾರಣೆಗೆ ಬಸವನನ್ನು ಬಿಡುವ ಸಂಪ್ರದಾಯ ಪದ್ಧತಿ ಇದೆ. ಗೋಮೂತ್ರ ಸಿಂಚನದ ಭೂಮಿಯಲ್ಲಿ ಬಂಜೆತನವಿಲ್ಲ. ಸರ್ವೋತ್ಕೃಷ್ಟ ಗುಣ ಹೊಂದಿದೆ ಎಂದರು.

ತಪೋವನ ಕ್ಷೇತ್ರ ಮನೆಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮಿ ಪ್ರಾಸ್ತಾವಿಕ ನುಡಿಯಾಡಿ, ಪ್ರಕೃತಿಯ ಸಾಧಕ-ಬಾಧಕಗಳ ನಡುವೆ ಮನುಷ್ಯ ಜೀವನ ಸಾಗುತ್ತಿದೆ. ಪ್ರಕೃತಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲದ ಮಾನವನ ಉಳಿವು ಪ್ರಕೃತಿಯ ನಡುವಿ ನಲ್ಲೆ ಇದ್ದು, ಜೀವರಾಶಿ ವೈವಿಧ್ಯತೆಗೆ ಅನುಗುಣವಾಗಿ ಬದುಕನ್ನು ಅನುಭವಿಸಬೇಕು ಎಂದರು.

ಮಡಿಕೇರಿ ಬೇಸಾಯ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಸಹಾಯಕ ಪ್ರಾಧ್ಯಾಪಕ ಡಾ. ಬಸವಲಿಂಗಯ್ಯ ಮಾತನಾಡಿ, ಕೃಷಿಕನ ಯಶಸ್ಸು ಕುಟುಂಬದ ದುಡಿಮೆಯನ್ನು ಅವಲಂಭಿಸಿದೆ. ಸಾವಯವ ಗೊಬ್ಬರದ ಜೊತೆ ರಾಸಾಯನಿಕ ಗೊಬ್ಬರವನ್ನೂ ಬಳಸಿದರೆ ಮಣ್ಣಿನ ಗುಣ ಚೆನ್ನಾಗಿರುತ್ತದೆ. ಮುಖ್ಯ ಬೆಳೆಗಳಿಗೆ ಪೂರಕವಾಗಿ ದುಡಿದರೆ ಸಮೃದ್ಧ ಬೆಳೆ ಪಡೆಯಬಹುದು ಎಂದರು.ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಪ್ರಭಾಕರ್, ತೋಟಗಾರಿಕಾ ಬೆಳೆಗಳಲ್ಲಿ ಸಾವಯವ ಗೊಬ್ಬರ ಬಳಸುವಿಕೆ ವಿಷಯದ ಬಗ್ಗೆ ಮಾತನಾಡಿದರು. ವಿಜ್ಞಾನಿ ಡಾ. ವೀರೇಂದ್ರ ಕುಮಾರ್, ಸಾವಯವ ಕೃಷಿಯಲ್ಲಿ ಕೀಟ ರೋಗ ಹತೋಟಿ ಕುರಿತು ಮಾತನಾಡಿದರು. ಸೋಮವಾರಪೇಟೆ ಕಾಫಿ ಮಂಡಳಿ ಕಿರಿಯ ಸಂಪರ್ಕಾಧಿಕಾರಿ ವಿಶ್ವನಾಥ್, ಕಾಫಿ ಬೆಳೆಯ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಅರಕಲಗೂಡು ಚಿಲುಮೆ ಮಠದ ಜಯದೇವ ಸ್ವಾಮೀಜಿ, ಆಲೂರು ಧರ್ಮಣ್ಣ, ಪ್ರಮುಖರಾದ ಎಸ್. ಮಹೇಶ್, ಯಶಸ್ವಿನಿ, ದೀಪಕ್ ಉಪಸ್ಥಿತರಿದ್ದರು.