ವೀರಾಜಪೇಟೆ, ಮಾ:೨೨: ಹೊಟೇಲ್‌ನಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಈರ್ವರನ್ನು ಬಂಧಿಸಿದ ಘಟನೆ ವೀರಾಜಪೇಟೆ ನಗರದ ಸುಣ್ಣದ ಬೀದಿಯಲ್ಲಿ ನಡೆದಿದೆ. ನಗರದ ಸುಣ್ಣದ ಬೀದಿ ನಿವಾಸಿ ತನ್ವೀರ್ (೨೫) ಮತ್ತು ವಿಜಯನಗರ ನಿವಾಸಿ ಆಸೀಫ್ (೨೮) ಬಂಧಿತರು. ಹೊಟೇಲ್ ಮಾಲೀಕ ಮುಸ್ತಾಫ ತಲೆಮರೆಸಿಕೊಂಡಿದ್ದಾನೆ.

ಸುಣ್ಣದ ಬೀದಿಯ ಇದ್ಗಾ ಮೈದಾನಕ್ಕೆ ತೆರಳುವ ರಸ್ತೆಯ ಬದಿಯಲ್ಲಿರುವ ಮುಸ್ತಾಫ ಅವರಿಗೆ ಸೇರಿದ ಹೋಟೆಲ್‌ನಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿರುವುದಾಗಿ ನಗರ ಠಾಣೆಗೆ ಬಂದ ಮಾಹಿತಿ ಅನ್ವಯ ನಗರ ಠಾಣಾಧಿಕಾರಿ ಜಗಧೀಶ್ ಧೂಳ ಶೆಟ್ಟಿ ಅವರು ಮತ್ತು ಸಿಬ್ಬಂದಿಗಳು ಹೊಟೇಲ್ ಮೇಲೆ ಧಾಳಿ ನಡೆಸಿದ್ದಾರೆ. ಈ ವೇಳೆಯಲ್ಲಿ ಮಾರಾಟಕ್ಕೆ ಸಿದ್ಧಗೊಂಡಿದ್ದ ಸುಮಾರು ಏಳು ಕೆ.ಜಿ. ಗೋಮಾಂಸ ಪತ್ತೆಯಾಗಿದೆ. ಹೊಟೇಲ್‌ನಲ್ಲಿ ಕಾರ್ಯನಿರ್ವಹಿಸುತಿದ್ದ ತನ್ವೀರ್ ಮತ್ತು ಆಶೀಫ್ ಅವರುಗಳನ್ನು ಬಂಧಿಸಿದ್ದಾರೆ. ಹೊಟೇಲ್ ಮಾಲೀಕ ವಿಷಯ ತಿಳಿದು ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬAಧಿಸಿದAತೆ ವೀರಾಜಪೇಟೆ ನಗರ ಠಾಣೆಯಲ್ಲಿ ಹೊಟೇಲ್ ಮಾಲೀಕ ಸೇರಿದಂತೆ ಮೂವರ ಮೇಲೆ ಕರ್ನಾಟಕ ರಾಜ್ಯ ಗೋಹತ್ಯೆ ಮತ್ತು ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಅಯ್ಯಪ್ಪ ಆದೇಶದ ಮೇರೆಗೆ ವೀರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ಅವರ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೀರಾಜಪೇಟೆ ನಗರ ಠಾಣಾಧಿಕಾರಿ ಜಗಧೀಶ್ ಧೂಳ ಶೆಟ್ಟಿ ಮತ್ತು ಸಿಬ್ಬಂದಿಗಳಾದ ಮುಸ್ತಾಫ, ಗಿರೀಶ್, ಸುಬ್ರಮಣಿ, ಧರ್ಮ, ಸತೀಶ್ ಮತ್ತು ಚಾಲಕ ರಮೇಶ್ ಇದ್ದರು.