ಸಿದ್ದಾಪುರ, ಮಾ. ೨೨: ರಸ್ತೆ ದುರಸ್ತಿ ಹೆಸರಿನಲ್ಲಿ ಗ್ರಾಮದ ರಸ್ತೆಯನ್ನು ಅಗೆದು, ವಾಹನ ಸಂಚಾರ ನಿರ್ಬಂಧಿಸಿದ ಗ್ರಾಮ ಪಂಚಾಯಿತಿ, ಇದೀಗ ಹಣದ ಕೊರತೆಯ ನೆಪದಲ್ಲಿ ಕಾಮಗಾರಿಯನ್ನು ಅರ್ಧ ಭಾಗ ಮಾತ್ರ ಮಾಡುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಪಿಡಿಓ ಹಾಗೂ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ.

ಈ ಕುರಿತು ಮಾತನಾಡಿದ ಗ್ರಾಮಸ್ಥರು ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆಗೆ ತೆರಳುವ ರಸ್ತೆಯು ತೀರಾ ಹದಗೆಟ್ಟಿದ್ದು, ಈ ಮಾರ್ಗವಾಗಿ ಶಾಲಾ ವಾಹನ, ವಯೋವೃದ್ದರು ಚಿಕಿತ್ಸೆಗೆ ವಾಹನದಲ್ಲಿ ತೆರಳುತ್ತಾರೆ. ಇತ್ತೀಚಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಕಾಮಗಾರಿಯ ಹೆಸರಿನಲ್ಲಿ ಸಂಚಾರವನ್ನು ನಿರ್ಬಂಧಿಸಿದೆ. ಕಾಮಗಾರಿಯು ಸಂಪೂರ್ಣವಾಗಿ ಆಗುವುದಾದರೆ ನಮ್ಮ ಬೆಂಬಲವಿದೆ, ಆದರೆ ಜನಪ್ರತಿನಿಧಿಗಳು ರಸ್ತೆ ಕಾಮಗಾರಿಗೆ ಬೇಕಾದ ಹಣದ ಕೊರತೆ ಇರುವುದಾಗಿ ಹೇಳಿ ಹದಗೆಟ್ಟ ರಸ್ತೆಯ ಅರ್ಧ ಭಾಗದಷ್ಟು ಮಾತ್ರ ಕಾಮಗಾರಿ ನಡೆಸುವುದಾಗಿ ತೀರ್ಮಾನ ಕೈಗೊಂಡಿರುವುದು ಸರಿಯಾದ ಕ್ರಮವಲ್ಲ. ರಸ್ತೆಯನ್ನು ಸಂಪೂರ್ಣವಾಗಿ ಕಾಂಕ್ರೀಟ್ ಮಾಡಬೇಕು ಇಲ್ಲ ಡಾಂಬರೀಕರಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪಿ.ಆರ್. ಭರತ್, ಜೋಸೆಫ್, ಗ್ರಾ.ಪಂ. ಸದಸ್ಯರಾದ ಶಿವದಾಸ್, ಸುಜಾತ, ಸುಹಾದ, ಶಂಶೀರ್ ಇನ್ನಿತರರು ಹಾಜರಿದ್ದರು.