ಶ್ರೀಮಂಗಲ, ಮಾ. ೨೨: ಮನ್ನೇರ ಕುಟುಂಬ ಆಶ್ರಯದಲ್ಲಿ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ - ೨೦೨೨ಕ್ಕೆ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಹರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಪಂದ್ಯಾವಳಿಯಲ್ಲಿ ೪೭ ಕೊಡವ ಕುಟುಂಬ ತಂಡಗಳು ಭಾಗವಹಿಸಲಿದ್ದು, ಪಂದ್ಯಾವಳಿ ಉದ್ಘಾಟನೆಗೂ ಮುನ್ನ ಮನ್ನೇರ ಕುಟುಂಬದ ಐನ್‌ಮನೆ – ಗುರುಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಹರಿಹರ ಸುಬ್ರಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ವಡ್ಡೋಲಗದೊಂದಿಗೆ ಮಹಿಳೆಯರು, ಮಕ್ಕಳು ಹಾಗೂ ಪುರುಷರು ಮುಖ್ಯ ರಸ್ತೆಯಲ್ಲಿ ಕ್ರೀಡಾ ಮೈದಾನಕ್ಕೆ ಮೆರವಣಿಗೆಯಲ್ಲಿ ಆಗಮಿಸಿದರು.

ವೇದಿಕೆಯಲ್ಲಿ ತವರು ಮನೆಯ ಮಹಿಳೆ ಬೊಳ್ಳಜಿರ ಸುಶೀಲಾ ಅಶೋಕ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

(ಮೊದಲ ಪುಟದಿಂದ) ಈ ಸಂದರ್ಭ ಪ್ರಾಸ್ತವಿಕವಾಗಿ ಮಾತನಾಡಿದ ಮನ್ನೆರ ಕುಟುಂಬದ ಅಧ್ಯಕ್ಷ ಮನ್ನೆರ ರಮೇಶ್ ಅವರು ಮಾತನಾಡಿ ಪ್ರಾಕೃತಿಕ ವಿಕೋಪ ಮತ್ತು ಕೋವಿಡ್ ೧೯ ಸೋಂಕು ಸಾಂಕ್ರಾಮಿಕ ಕಾಯಿಲೆಯಿಂದ ಹಲವಾರು ಕೌಟುಂಬಿಕ ಕ್ರೀಡಾಕೂಟ ಸ್ಥಗಿತವಾಗಿತ್ತು. ಕೊಡವ ಕುಟುಂಬಗಳಲ್ಲಿ ಸ್ನೇಹ, ಬಾಂಧವ್ಯ ಬೆಸೆಯಲು, ಸಹಕಾರ- ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಈ ಪಂದ್ಯಾವಳಿಯ ಮೂಲಕ ವೇದಿಕೆ ಒದಗಿಸಿಕೊಡಲು ಸಹಕಾರಿಯಾಗಲಿದೆ. ಗ್ರಾಮೀಣ ಭಾಗವಾದ ಹರಿಹರ ಗ್ರಾಮದಲ್ಲಿ ನಡೆಯುತ್ತಿರುವ ಪಂದ್ಯಾವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೊಡವ ಕುಟುಂಬದ ತಂಡಗಳು ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಕ್ರೀಡೆಯಲ್ಲಿ ಸೋಲು, ಗೆಲುವನ್ನು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸಬೇಕು. ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲು ಮನ್ನೆರ ಕುಟುಂಬದೊAದಿಗೆ ಗ್ರಾಮಸ್ಥರು ಹಾಗೂ ಕ್ರೀಡಾಭಿಮಾನಿಗಳ ಸಹಕಾರ ಅಗತ್ಯವಿದೆ. ಇದು ಕೇವಲ ಕ್ರಿಕೆಟ್ ಪಂದ್ಯಾವಳಿಯಾಗದೇ ಕುಟುಂಬ ಹಾಗೂ ಗ್ರಾಮದ ಹಬ್ಬದ ವಾತಾವರಣವನ್ನು ಮೂಡಿಸುವಂತಾಗಬೇಕು ಎಂದು ಹೇಳಿದರು.

ನಂತರ ಮೈದಾನದಲ್ಲಿ ಮನ್ನೆರ ಕುಟುಂಬದ ಅಧ್ಯಕ್ಷ ಮನ್ನೆರ ರಮೇಶ್ ಅವರಿಗೆ ಕಾರ್ಯದರ್ಶಿ ಮನ್ನೆರ ರಜಿತ್ ಕಾರ್ಯಪ್ಪ ಅವರು ಬೌಲಿಂಗ್ ಮಾಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಮನ್ನೆರ ಕುಟುಂಬದ ಹಿರಿಯರಾದ ಸೋಮಯ್ಯ, ಮುತ್ತಣ್ಣ, ರಘುವಿಶ್ವನಾಥ್, ಕಟ್ಟಿಭೀಮಯ್ಯ, ಅರುಣ, ಸರುರಮೇಶ್, ರಾಣಿ ಪಾರ್ವತಿ ಮತ್ತಿತರು ಭಾಗವಹಿಸಿದ್ದರು.