ಕುಶಾಲನಗರ, ಮಾ. ೧೯: ಅಕ್ರಮ ಬೀಟೆ ಮರದ ನಾಟ ಸಾಗಾಟ ಸಂದರ್ಭ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೀಟೆ ನಾಟ ಸೇರಿದಂತೆ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಕುಶಾಲನಗರ ಸಿದ್ದಾಪುರ ರಸ್ತೆಯ ಹೊಸಪಟ್ಟಣ ಬಳಿ ಪಿಕಪ್ ಬೊಲೆರೋ ವಾಹನದಲ್ಲಿ (ಕೆಎ-೧೨ಬಿ -೮೯೧೪) ಗುರುವಾರ ರಾತ್ರಿ ವೇಳೆ ೫ ಬೀಟೆ ನಾಟಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ವಾಹನ ವಶಪಡಿಸಿಕೊಂಡು ಚಾಲಕ ಎಂ.ಎಚ್ ಅಬ್ದುಲ್ ರಹೀಮ್ ಎಂಬಾತನನ್ನು ಬಂಧಿಸಲಾಗಿದೆ ಆರೋಪಿ ನಾಪೋಕ್ಲು ಬೇತು ಗ್ರಾಮದ ನಿವಾಸಿಯಾಗಿದ್ದು ಇನ್ನಿಬ್ಬರು ಆರೋಪಿಗಳಾದ ಕೊಟ್ಟಮುಡಿ ಮಹಮ್ಮದ್, ಮತ್ತು ತ್ಯಾಗತ್ತೂರು ಗ್ರಾಮದ ಪಿ.ಎಸ್ ಸಿದ್ದಿಕ್ ತಪ್ಪಿಸಿಕೊಂಡಿದ್ದಾರೆ. ಮರದ ಮೌಲ್ಯ ಅಂದಾಜು ೩.೫ ಲಕ್ಷ ವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಸೋಮವಾರಪೇಟೆ ಎಸಿಎಫ್ ನೆಹರು ಅವರ ಮಾರ್ಗದರ್ಶನದಲ್ಲಿ ಅನನ್ಯ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಎಸ್. ಸುಬ್ರಾಯ, ಅರಣ್ಯ ರಕ್ಷಕರಾದ ರವಿ ಉತ್ನಾಳ, ವೀಕ್ಷಕರಾದ ಅಲ್ಬರ್ಟ್ ಡಿಸೋಜಾ, ಟಿ.ಟಿ. ಕುಶಾಲಪ್ಪ, ವಾಹನ ಚಾಲಕರಾದ ವಾಸು ಮತ್ತು ಆರ್.ಆರ್.ಟಿ. ಸಿಬ್ಬಂದಿಗಳು ಪಾಲ್ಗೊಂಡಿದ್ದರು.