ಗುಡ್ಡೆಹೊಸೂರು, ಮಾ. ೧೯: ಇಲ್ಲಿನ ಸಮೀಪದ ಬಸವನಹಳ್ಳಿ ಮೂಲಕ ಹರಿಯುವ ಕಾವೇರಿ ನದಿಯಲ್ಲಿ ಈಜಲು ಹೋಗಿ ವಿದ್ಯಾರ್ಥಿಯೋರ್ವ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಬಸವನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮರೂರು ಗ್ರಾಮದ ಚಂದ್ರಶೇಖರ್ ವಿಮಲ ದಂಪತಿಯ ಪುತ್ರ ರೋಷನ್ (೧೪) ಮೃತಪಟ್ಟ ದುರ್ಧೈವಿ. ತನ್ನ ಸ್ನೇಹಿತರೊಂದಿಗೆ ಸ್ಥಳೀಯ ಕಾವೇರಿ ನದಿಯಲ್ಲಿ ಈಜಲು ಹೋದ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ರೋಷನ್ ಮುಳುಗಿರುವುದು ತಿಳಿದು ಸ್ನೇಹಿತರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

(ಮೊದಲ ಪುಟದಿಂದ) ನಂತರ ನೀರಿನಲ್ಲಿ ರೋಷನ್ ಮೃತದೇಹ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು. ಕತ್ತಲಾದ ಹಿನ್ನೆಲೆ ಕಾರ್ಯಾಚರಣೆಗೆ ಅಡ್ಡಿಯಾಯಿತು.

ಸ್ಥಳೀಯ ಈಜುಗಾರರು ಕೂಡ ಪತ್ತೆ ಕಾರ್ಯದಲ್ಲಿ ಕೈಜೋಡಿಸಿದರು. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. -ಗಣೇಶ್ ಕುಡೆಕ್ಕಲ್