ಶ್ರೀಮಂಗಲ/ಗೋಣಿಕೊಪ್ಪ, ಮಾ. ೧೯: ಗ್ರಾಮೀಣ ಭಾಗದ ದುಸ್ಥಿತಿಯ ರಸ್ತೆ, ಕುಡಿಯುವ ನೀರಿನ ಸಮಸ್ಯೆ, ಕಂದಾಯ ಇಲಾಖೆಯಲ್ಲಿ ವಿಳಂಬ ಕಡತ ವಿಲೇವಾರಿ, ವಿದ್ಯುತ್ ಸಮಸ್ಯೆ, ಆರ್.ಟಿ.ಸಿ ಹಾಗೂ ಸರ್ವೆ ಇಲಾಖೆಯಲ್ಲಿನ ಸಮಸ್ಯೆಯ ಮಹಾಪೂರವನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹುದಿಕೇರಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನರು ಮುಂದಿಟ್ಟು ಪರಿಹಾರಕ್ಕಾಗಿ ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಅವರ ಅಧ್ಯಕ್ಷತೆಯಲ್ಲಿ ಹುದಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಜನರ ಸಮಸ್ಯೆಯನ್ನು ಸಮಾಧಾನದಲ್ಲಿ ಆಲಿಸಿ ಸಂಬAಧಿಸಿದ ಇಲಾಖಾಧಿಕಾರಿ ಗಳಿಂದ ಉತ್ತರ ನೀಡಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಗ್ರಾಮದ ಮಹಿಳೆಯರು ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಆಗಮಿಸಿ ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟರು. ಜಿಲ್ಲಾಧಿಕಾರಿಗಳು ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದರು. ಉಳಿದ ಸಮಸ್ಯೆಗಳನ್ನು ತಮ್ಮ ಸಹಾಯಕ ಅಧಿಕಾರಿಗಳ ಮೂಲಕ ಕೂಡಲೇ ಬಗೆಹರಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದರು.
ಬೆಳೆಗಾರ ಕೆ.ಎಂ. ಸುರೇಶ್ ಮಾತನಾಡಿ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕೇವಲ ಇಬ್ಬರು ಲೈನ್ ಮ್ಯಾನ್‌ಗಳು ಇದ್ದಾರೆ. ಇವರಲ್ಲಿ ಒಬ್ಬರನ್ನು ಬಿರುನಾಣಿಗೆ ಬಿಲ್ ಸಂಗ್ರಹಕ್ಕೆ ಕಳುಹಿಸಲಾಗಿದೆ. ತೋಟಕ್ಕೆ ನೀರುವ ಹಾಯಿಸುವ ಸಂದರ್ಭ ಪಂಪ್‌ಸೆಟ್ಟ್ಗಳಿಗೆ ವಿದ್ಯುತ್ ಕಡಿತವಾಗುತ್ತಿದೆ. ತಿಂಗಳಿಗೆ ರೂ. ೧೨೦೦ ಕನಿಷ್ಟ ದರ ಪಾವತಿಸುತ್ತಿದ್ದರೂ, ವಿದ್ಯುತ್ ಸಮಸ್ಯೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಚೆಸ್ಕಾಂನ ಮಡಿಕೇರಿ ವಿಭಾಗದ ಅಧಿಕಾರಿ ಜಿಲ್ಲೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವ ಬಗ್ಗೆ ಈಗಾಗಲೇ ನಿಗಮಕ್ಕೆ ತಿಳಿಸಲಾಗಿದೆ. ಕೆಲವೇ ತಿಂಗಳಿನಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಮೊದಲ ಆದ್ಯತೆಯಾಗಿ ಪೊನ್ನಂಪೇಟೆ ತಾಲೂಕಿಗೆ ಬೇಕಾದ ಸಿಬ್ಬಂದಿಗಳನ್ನು ನೇಮಿಸಲಾಗುವುದು ಎಂದು ಭರವಸೆ ನೀಡಿದರು.
ವೀರಾಜಪೇಟೆ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಮಾತನಾಡಿ, ಜಿಲ್ಲೆಯ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ಸಾರ್ವಜನಿಕರ ಕಡತ ವಿಲೇವಾರಿ ಮಾಡಲು ಲಂಚ ನೀಡಬೇಕಾಗಿದೆ. ಹಿರಿಯ ನಾಗರಿಕರು ಜಿಲ್ಲೆಯ ವಿವಿಧ ಇಲಾಖೆಯಲ್ಲಿ ತಮ್ಮ ಕೆಲಸ ಕಾರ್ಯಕ್ಕಾಗಿ ಅಲೆದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಹಣಿಯಲ್ಲಿನ ಲೋಪ ದೋಷಗಳ ತಿದ್ದುಪಡಿ, ಪೌತಿಖಾತೆ, ಸರ್ಕಾರದ ಯೋಜನೆಗಳಾದ ವೃದ್ದಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನ, ಅಂತ್ಯ ಸಂಸ್ಕಾರದ ಪರಿಹಾರ ಧನ, ರಾಷ್ಟಿçÃಯ
(ಮೊದಲ ಪುಟದಿಂದ) ಕುಟುಂಬ ನೆರವು ಯೋಜನೆ, ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವುದು, ಗ್ರಾಮಗಳಿಗೆ ಸ್ಮಶಾನ ಕಲ್ಪಿಸುವುದು, ಆಶ್ರಯಯೋಜನೆಯಲ್ಲಿ ಜಮೀನು ಕಾಯ್ದಿರಿಸುವ ಬಗ್ಗೆ, ಆಧಾರ್‌ಕಾರ್ಡ್ನ ಅನುಕೂಲತೆ ಮತದಾರನ ಪಟ್ಟಿಯಲ್ಲಿನ ಪರಿಷ್ಕರಣೆ, ಪ್ರಕೃತಿ ವಿಕೋಪದಿಂದ ಹಾನಿಯಾದ ಮನೆಗಳಿಗೆ ಹಾಗೂ ಬೆಳೆಗಳಿಗೆ ಪರಿಹಾರ, ಸಕಾಲ ಯೋಜನೆಯಡಿಯಲ್ಲಿ ಒದಗಿಸುವ ಸೌಲಭ್ಯಗಳ ಬಗ್ಗೆ ಹದ್ದುಬಸ್ತು, ಪೋಡಿ ಮಾಡುವುದು ಹಾಗೂ ಪಡಿತರಚೀಟಿಯಲ್ಲಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ತಮ್ಮ ಅಹವಾಲು ಮುಂದಿಟ್ಟರು.
ರಾಜ್ಯದಲ್ಲಿ ೧೦೦ ಜನ ಸರ್ವೆಯರ್‌ಗಳನ್ನು ನೇಮಕಾತಿ ಮಾಡಿಕೊಳ್ಳಲು ಕಂದಾಯ ಸಚಿವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ೧೫ ಸರ್ವೆಯರ್ ಮಾತ್ರ ಇದ್ದು, ಸರ್ವೆಯರ್ ಕೊರತೆಯಿಂದ ಸರ್ವೆ ವಿಳಂಬವಾಗುತ್ತಿದೆ. ಹೊಸ ನೇಮಕಾತಿ ಮೂಲಕ ಜಿಲ್ಲೆಗೆ ಸರ್ವೆಯರ್ ಬಂದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕೂರ್ಗ್ ಬೈ ರೇಸ್ ಮತ್ತು ಜಮ್ಮ ಹಿಡುವಳಿಯ ಕೋವಿ ಹಕ್ಕಿನ ಬಗ್ಗೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಬರೆದಿರುವ ಪತ್ರದ ಬಗ್ಗೆ ಶಂಕರಿ ಪೊನ್ನಪ್ಪ ಅವರು ನೇರವಾಗಿ ಜಿಲ್ಲಾಧಿಕಾರಿಯವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಸರ್ಕಾರದಿಂದ ಈ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸೂಚನೆ ಬಂದಾಗ ಅದಕ್ಕೆ ಉತ್ತರ ನೀಡಿದ್ದೇನೆ ಎಂದು ಉತ್ತರಿಸಿದರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ
ಪ್ರಮುಖವಾಗಿ ಕಂದಾಯ ಹಾಗೂ ಸರ್ವೆ ಇಲಾಖೆಯಲ್ಲಿ ನಡೆಯುವ ಭ್ರಷ್ಟಚಾರಕ್ಕೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿಗಳ ಬಳಿ ಹುದಿಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಒಕ್ಕೂರಲಿನ ಮನವಿ ಮಾಡಿದರು. ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳ ಕಡತವು ಇವಾಗಲೂ ಬಾಕಿ ಉಳಿದಿವೆ. ಪ್ರತಿ ಕಡತಕ್ಕೆ ಇಂತಿಷ್ಟು ಹಣ ನಿಗದಿ ಪಡಿಸಿದ್ದಾರೆ. ಮಧ್ಯವರ್ತಿಗಳು ತೆರಳಿದರೆ ಕಡತಗಳು ಸರಿ ಮಾಡಿಕೊಡಲಾಗುತ್ತಿದೆ. ಸಾಮಾನ್ಯ ನಾಗರಿಕರು ತೆರಳಿದರೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ತಮ್ಮ ನೋವನ್ನು ಡಿಸಿ ಮುಂದೆ ತೋಡಿಕೊಂಡರು.
ಕೋಣಗೇರಿ ಗ್ರಾಮದ ಕಾಟಿಕುಟ್ಟಿರ ಕುಟುಂಬದ ಮಹಿಳೆಯರು ತಮ್ಮ ಗ್ರಾಮದಲ್ಲಿ ರಸ್ತೆ ಹದಗೆಟ್ಟಿದ್ದು, ಹಾಗೆಯೇ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ನೋವು ತೊಡಿಕೊಂಡರು. ಮನೆಯಲ್ಲಿ ವಯಸ್ಸಾದವರು, ಅನಾರೋಗ್ಯ ಪೀಡಿತರು ಇದ್ದಾರೆ. ರಸ್ತೆ ಸರಿಪಡಿಸಲು ಹಾಗೂ ನೀರಿನ ವ್ಯವಸ್ಥೆ ಮಾಡಲು ಮನವಿ ಮಾಡಿಕೊಂಡರು.
ಕೂಟಿಯಾಲ ಸೇತುವೆ ವಿಷಯದಲ್ಲಿ ಅಲ್ಲಿನ ಗ್ರಾಮಸ್ಥರು ಮನವಿ ಸಲ್ಲಿಸಿದರು.ಈ ವೇಳೆ ಪಿಡಬ್ಲೂö್ಯಡಿ ಎಇಇ ಸರ್ವೆ ಕಾರ್ಯ ಮುಗಿದಿದ್ದು ಆದಷ್ಟು ಬೇಗನೇ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ತಾಲೂಕು ಕೇಂದ್ರಕ್ಕೆ ಕಾಯಕಲ್ಪ
ಪೊನ್ನಂಪೇಟೆ ನೂತನ ತಾಲೂಕಿಗೆ ಅಗತ್ಯ ಸಿಬ್ಬಂದಿಗಳ ನೇಮಕ, ನೂತನ ಕಟ್ಟಡ ನಿರ್ಮಾಣ ಭೂಮಿ ಕೇಂದ್ರ ಆರಂಭಿಸುವAತೆ ಪೊನ್ನಂಪೇಟೆ ನಾಗರಿಕ ವೇದಿಕೆಯ ಪ್ರಮುಖರಾದ ಎಂ.ಪಿ. ಅಪ್ಪಚ್ಚು, ಕೆ.ಸಿ.ಲಾಲಪ್ಪ, ಮುಂತಾದವರು ಗಮನ ಸೆಳೆದರು. ಇವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈಗಾಗಲೇ ಅಗತ್ಯ ಸಿಬ್ಬಂದಿ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಕೆಲವೇ ತಿಂಗಳಿನಲ್ಲಿ ಸಿಬ್ಬಂದಿಗಳು ನೇಮಕಾತಿ ಆಗಲಿದ್ದಾರೆ. ತಾಲೂಕಿನಲ್ಲಿ ಭೂಮಿ ಕೇಂದ್ರ ಆರಂಭಿಸಿಲು ನಿರ್ದೇಶನ ನೀಡಲಾಗಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆಗೊಳಿಸಲಿದೆ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಉತ್ತರಿಸಿದರು.
ಗೋಣಿಕೊಪ್ಪದ ಟಿ.ಎಲ್ ಶ್ರೀನಿವಾಸ್ ಅವರು ಮಾತನಾಡಿ ದಕ್ಷಿಣ ಕೊಡಗಿನ ಜಲಮೂಲಗಳನ್ನು ಬಳಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಮಹಾದೇವ್ ಅವರು ಬೇತ್ರಿಯಿಂದ ವೀರಾಜಪೇಟೆಗೆ, ಪಚ್ಚಾಟ್‌ನಿಂದ ಗೋಣಿಕೊಪ್ಪ, ಪೊನ್ನಂಪೇಟೆಗೆ, ಕೊಂಗಣ ನದಿಯಿಂದ ಕುಟ್ಟದವರೆಗೆ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲು ರೂ. ೩೨೧ ಕೋಟಿ ಕ್ರಿಯಾಯೋಜನೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು. ಕ್ರಿಯಾಯೋಜನೆ ಸರ್ಕಾರದ ಅಂಗೀಕಾರಕ್ಕೆ ಕಳುಹಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಶ್ರೀಮಂಗಲದ ಪುಗ್ಗೇರ ವಿಶು ಅವರು ಮಾತನಾಡಿ ಶ್ರೀಮಂಗಲ ಟಿ.ಶೆಟ್ಟಿಗೇರಿಯಲ್ಲಿ ಲಕ್ಷ÷್ಮಣ ತೀರ್ಥದ ನಾಲೆಯನ್ನು ಮುಚ್ಚಿರುವುದನ್ನು ತೆರವುಗೊಳಿಸಲು ಹೈಕೋರ್ಟ್ನಿಂದ ಆದೇಶ ಬಂದರೂ ತೆರವು ಮಾಡದೇ ಇರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಪ್ರಕರಣ ಕೋರ್ಟ್ನಲ್ಲಿರುವುದರಿಂದ ಸಾರ್ವಜನಿಕವಾಗಿ ಈ ಬಗ್ಗೆ ಹೇಳಲು ಸಾಧ್ಯವಿಲ್ಲ. ತಾ. ೨೨ರಂದು ವಿಚಾರಣೆಯಂದು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಭೂ ಪರಿವರ್ತನೆ
ನಾಗಕರಿಗೆ ಅವಶ್ಯಕತೆ ಇರುವ ಭೂ ಪರಿವರ್ತನೆಯನ್ನು ಇನ್ನು ಮೂರು ದಿನಗಳೊಳಗೆ ಮಾಡಿಕೊಡಲಾಗುವುದು. ಈ ಬಗ್ಗೆ ಭೂ ಮಾಲೀಕರೆ ನಿಗದಿಪಡಿಸಿದ ನಮೂನೆಗಳನ್ನು ತಾವೇ ಭರ್ತಿ ಮಾಡಿ ಆನ್‌ಲೈನ್‌ಗಳಲ್ಲಿ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಸುಳ್ಳು ಮಾಹಿತಿಗಳನ್ನು ನೀಡಿ ಭೂ ಪರಿವರ್ತನೆಗೆ ಮುಂದಾದರೆ ಅಂತಹ ಭೂಮಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಲಾಖೆಗೆ ಅಧಿಕಾರವಿದೆ. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಅವಕಾಶವಿದೆ. ಮುಂದೆ ಆರ್‌ಟಿಸಿ ತಿದ್ದುಪಡಿ ಅಭಿಯಾನ ನಡೆಯಲಿದೆ ಎಂದು ಡಿಸಿ ಮಾಹಿತಿ ಒದಗಿಸಿದರು.
ಮುಸ್ಲಿಂ ಬ್ಯಾಂಕ್ ಅವ್ಯವಹಾರ ಪ್ರಸ್ತಾಪ
ವೀರಾಜಪೇಟೆ ಹಾಗೂ ಗೋಣಿಕೊಪ್ಪಲುವಿನಲ್ಲಿ ವ್ಯವಹಾರ ನಡೆಸುತ್ತಿದ್ದ ಮುಸ್ಲಿಂ ಬ್ಯಾಂಕ್ ಕೋಟ್ಯಾಂತರ ಹಣವನ್ನು ಗ್ರಾಹಕರಿಗೆ ನೀಡದೆ ವಂಚಿಸಿದೆ. ಈ ಬಗ್ಗೆ ಠೇವಣಿದಾರರಿಗೆ ಹಣವನ್ನು ಒದಗಿಸುವಂತೆ ಮುಲ್ಲೆಂಗಡ ಶಂಕರಿ ಪೊನ್ನಪ್ಪ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಹಿರಿಯ ನಾಗರಿಕರು ತಮ್ಮ ವೃತ್ತಿಯ ನಂತರ ಹಣವನ್ನು ಹೆಚ್ಚಿನ ಬಡ್ಡಿ ಸಿಗಬಹುದೆಂಬ ನಿರೀಕ್ಷೆಯಿಂದ ಈ ಬ್ಯಾಂಕಿನಲ್ಲಿ ೧೯೪ ಹಿರಿಯ ನಾಗರಿಕರು ಹಣವನ್ನು ಠೇವಣಿಯಾಗಿ ಇಟ್ಟಿದ್ದಾರೆ. ಈ ಹಣವನ್ನು ಆಡಳಿತ ಮಂಡಳಿಯು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರ ನೀಡಿದ ಸಂಬAಧಪಟ್ಟ ಅಧಿಕಾರಿ ಮೋಹನ್, ಈ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲವೆ ತಿಂಗಳಿನಲ್ಲಿ ತನಿಖೆಯು ಪೂರ್ಣಗೊಳ್ಳಲಿದೆ. ಗ್ರಾಹಕರು ಠೇವಣಿಯಾಗಿ ಇಟ್ಟಿರುವ ಹಣವನ್ನು ನೀಡುವ ಕುರಿತು ಇಲಾಖೆಯು ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರ ಪ್ರಕಾಶ್, ವಿವಿಧ ಇಲಾಖೆಯ ಅಧಿಕಾರಿಗಳಾದ, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ, ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಪೊನ್ನಂಪೇಟೆ ತಹಶೀಲ್ದಾರ್ ಎನ್.ಎಸ್. ಪ್ರಶಾಂತ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ಅಪ್ಪಣ್ಣ, ಕೃಷಿ ನಿರ್ದೇಶಕಿ ಶಭಾನಶೇಕ್, ಕಾಫಿ ಬೋರ್ಡ್ ಹಿರಿಯ ಸಂಪರ್ಕ ಅಧಿಕಾರಿ ಡಾ.ಶ್ರೀದೇವಿ, ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಮಮತ, ಅಬಕಾರಿ ಇಲಾಖೆಯ ಜಗದೀಶ್ ನಾಯ್ಕ್, ಡಿಡಿಎಲ್‌ಆರ್ ಶ್ರೀನಿವಾಸ್, ತೋಟಗಾರಿಕೆ ನಿರ್ದೇಶಕ ಚೆಕ್ಕೆರ ಪ್ರಮೋದ್, ಐಟಿಡಿಪಿ ಅಧಿಕಾರಿ ಹೊನ್ನೆಗೌಡ, ಕಾರ್ಮಿಕ ಇಲಾಖಾ ಅಧಿಕಾರಿ ಅನಿಲ್, ಕೆಪಿಟಿಸಿಎಲ್‌ನ ಮದೇಶ್, ಮೀನುಗಾರಿಕೆ ಇಲಾಖೆಯ ಕೆ.ಟಿ. ದರ್ಶನ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಚಂದ್ರಶೇಖರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳಾದ ಗುರುಶಾಂತಪ್ಪ ಪ್ರೀತಿ, ಚಿಕ್ಕ ಮಾದು, ಎಸಿಎಫ್ ಉತ್ತಪ್ಪ, ಆರ್‌ಎಫ್‌ಒ ಅಶೋಕ್ ಹುನಗುಂದ, ಶಿರೆಸ್ತೆದಾರ್ ರಾಧಕೃಷ್ಣ, ಸರ್ವೆ ಇಲಾಖೆಯ ಬಾನಂಡ ಅರುಣ್ ಸೇರಿದಂತೆ ಇನ್ನಿತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
- ಹರೀಶ್ ಮಾದಪ್ಪ / ಹೆಚ್.ಕೆ. ಜಗದೀಶ್