ಶನಿವಾರಸಂತೆ, ಮಾ. ೧೭: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕೊಳತ್ತೂರು ಗ್ರಾಮದಲ್ಲಿ ೪೦೦ ವರ್ಷಗಳ ಇತಿಹಾಸವಿರುವ ಬಾವಿ ಬಸವೇಶ್ವರ ದೇವರ ಆರಾಧನಾ ಮಹೋತ್ಸವ ತಾ. ೨೧ ರಂದು ಮಧ್ಯಾಹ್ನ ೧೨ ರಿಂದ ೩ರ ವರೆಗೆ ನಡೆಯಲಿದೆ.
ಪ್ರತಿ ವರ್ಷ ಶಿವರಾತ್ರಿ ಹಬ್ಬದ ನಂತರ ಹಾಗೂ ಯುಗಾದಿ ಹಬ್ಬದ ಒಳಗಡೆ ವಾರ್ಷಿಕ ವಿಶೇಷ ಹಬ್ಬ ನಡೆಯುತ್ತದೆ. ಪ್ರಕೃತಿಯ ನಡುವೆ ಮೇಲ್ಭಾಗದಲ್ಲಿ ಉದ್ಭವ ಬಸವೇಶ್ವರ ದೇವರ ವಿಗ್ರಹದ ಗುಡಿಯಿದ್ದ ಕೆಳ ಭಾಗದಲ್ಲಿ ಸಿಹಿ ನೀರಿನ ತೀರ್ಥದ ಕೊಳವಿದೆ. ಇದಕ್ಕೆ ಹೊಂದಿಕೊAಡAತೆ ಕೆರೆಯೊಂದು ಇದೆ. ವರ್ಷಕ್ಕೊಮ್ಮೆ ನಡೆಯುವ ಆರಾಧನಾ ಮಹೋತ್ಸವದಲ್ಲಿ ಭಕ್ತಾದಿಗಳು ಹಣ್ಣು ಕಾಯಿ ಪೂಜೆ ಮಾಡಿಸಿಕೊಂಡು ತೀರ್ಥಕೊಳಕ್ಕೆ ಹರಕೆಯ ರೂಪದಲ್ಲಿ ನಾಣ್ಯವನ್ನು ಹಾಕಿ, ಸಿಹಿ ನೀರಿನ ತೀರ್ಥ ತೆಗೆದುಕೊಂಡು ಹೋಗುತ್ತಾರೆ. ಈ ತೀರ್ಥವನ್ನು ಜಾನುವಾರುಗಳಿಗೆ ಕುಡಿಸಿದರೆ ಯಾವುದೇ ಕಾಯಿಲೆಯಾದರೂ ವಾಸಿಯಾಗುವುದು ಎಂಬ ನಂಬಿಕೆ ಇದೆ. ಮಕ್ಕಳಿಗೆ ಮುಡಿ ತೆಗೆಯುವ ಸಂಪ್ರದಾಯವೂ ಇದೆ. ದೇವರಿಗೆ ಭಕ್ತಾದಿಗಳು ಮಾಡಿಕೊಂಡ ಹರಕೆಯಂತೆ ಸಾವಿರಾರು ತೆಂಗಿನ ಕಾಯಿ ಈಡುಗಾಯಿ ಒಡೆಯುತ್ತಾರೆ.