ಚೆಯ್ಯಂಡಾಣೆ, ಮಾ. ೧೫: ಚೆಯ್ಯಂಡಾಣೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮಕ್ಕೆ ಒಳಪಟ್ಟ ರಸ್ತೆಯು ತೀವ್ರ ಶೋಚನೀಯ ಸ್ಥಿತಿಯಲಿದ್ದು, ಈ ರಸ್ತೆಯು ಕಬ್ಬೆ (ಚೇಲಾವರ) ಫಾಲ್ಸ್ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಕರಡ ಕೀಮಲೆ ಕಾಡು ಗಿರಿಜನ ಕಾಲೋನಿಗೆ, ತಟ್ಟಮಕ್ಕಿ ಪೈಸಾರಿಗೆ ಹಾಗೂ ಸ್ಥಳೀಯ ೨೦ಕ್ಕೂ ಹೆಚ್ಚು ಕುಟುಂಬಸ್ಥರು ದಿನನಿತ್ಯ ಸಂಚರಿಸುವ ರಸ್ತೆ ಇದಾಗಿದೆ. ಈ ರಸ್ತೆಯ ೬ ಕಿ.ಲೋ. ಸಂಚಾರ ದುಸ್ತರವಾಗಿದ್ದು ೬ ವರ್ಷಗಳಿಂದ ದುರಸ್ತಿ ಕಂಡಿಲ್ಲ.

ರಸ್ತೆ ದುರಸ್ತಿಪಡಿಸದ ಕಾರಣ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಗಳಿಗೆ ತೆರಳಲು ಅಡ್ಡಿಯಾಗಿದೆ. ಗ್ರಾಮಕ್ಕೆ ಬಾಡಿಗೆ ವಾಹನ ಬರಲು ಹಿಂದೇಟು ಹಾಕುತ್ತಿದ್ದು, ದುಪ್ಪಟ್ಟು ಬಾಡಿಗೆ ಕೇಳುತ್ತಿದ್ದಾರೆ.

ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಸೇತುವೆ ನಿರ್ಮಿಸಿದ್ದು ಆದರ ಕಾಮಗಾರಿ ಕೂಡ ಅರ್ಧದಲ್ಲೇ ನಿಂತಿದ್ದು, ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಎಚ್ಚೆತ್ತು ಇನ್ನಾದರೂ ಈ ರಸ್ತೆಯ ಕಾಮಗಾರಿ ಕೈಗೊಳ್ಳಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮಸ್ಥರು ಖುದ್ದು ಕತ್ತಿ ಗುದ್ದಲಿ, ಬಾಂಡ್ಲಿ, ಕುಕ್ಕೆ, ಪೊರಕೆಗಳನ್ನು ಹಿಡಿದು ರಸ್ತೆಗೆ ಇಳಿದು ರಸ್ತೆಯ ಉಭಯ ಕಡೆಯ ಕಾಡುಗಳನ್ನು ಕಡಿದು, ಗುಂಡಿ ಮುಚ್ಚಿದರು. ಗ್ರಾಮಸ್ಥೆ ಜೆ.ಜೆ. ಬೇಬಿ ಮಾತನಾಡಿ, ಈ ರಸ್ತೆಯು ಸಂಚರಿಸಲು ಅಯೋಗ್ಯವಾಗಿದ್ದು, ರಸ್ತೆಯಲ್ಲಿ ಸಂಚರಿಸುವ ಸಂದರ್ಭ ಹಲವಾರು ಅಪಘಾತಗಳು ಸಂಭವಿಸಿದ್ದು. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ದ್ವಿಚಕ್ರ ವಾಹನ ಹಲವಾರು ಬಾರಿ ಅವಘಡ ಸಂಭವಿಸಿದೆ. ಆದರೂ ಕೂಡ ಈ ರಸ್ತೆಯನ್ನು ದುರಸ್ತಿಪಡಿಸುತ್ತಿಲ್ಲ. ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದು ಯಾವುದೇ ಪ್ರಾಯೋಜನವಾಗಿಲ್ಲ. ಆದ್ದರಿಂದ ಚೇಲವಾರ ಗ್ರಾಮಸ್ಥರು ಮುಖ್ಯವಾಗಿ ಮಹಿಳೆಯರ ನ್ನೊಳಗೊಂಡು ಈ ರಸ್ತೆಯ ಕಾಮಗಾರಿ ಕೈಗೊಂಡಿದ್ದೇವೆ ಎಂದರು.

ಗ್ರಾಮಸ್ಥ ದೇವಿಪ್ರಸಾದ್ ಅವರು ಮಾತನಾಡಿ, ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಮೂಲ ಕಾರಣ ಸುಮಾರು ೬-೭ ವರ್ಷಗಳಿಂದ ಈ ರಸ್ತೆಯು ಅಭಿವೃದ್ಧಿ ಕಂಡಿಲ್ಲ. ಬರಿ ತೇಪೆ ಹಾಕುವ ಕೆಲಸ ಮಾತ್ರ ಆಗುತ್ತಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗಾಗಲಿ, ಸದಸ್ಯರಿಗಾಗಲಿ, ಚೇಲಾವರದಿಂದ ಆಯ್ಕೆಯಾದ ಸದಸ್ಯರಿಗಾಗಲಿ ಹಲವಾರು ಬಾರಿ ಮನವಿ ಮಾಡಿದರೂ ಕೂಡ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ನಮಗೆ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗಲು, ಮಳೆಗಾಲ ಬಂದರೆ ತುಂಬಾ ತೊಂದರೆಯಾಗುತ್ತಿದ್ದು, ರಾತ್ರಿಯಾದರೆ ಈ ಭಾಗದಲ್ಲಿ ಆನೆಗಳ ಉಪಟಳ ಕೂಡ ಹೆಚ್ಚಾಗಿದೆ. ಆದರಿಂದ ಗ್ರಾಮಸ್ಥರು ಒಟ್ಟು ಸೇರಿ ಈ ರಸ್ತೆ ಕಾಮಗಾರಿ ಕೈಗೊಂಡಿದ್ದೇವೆ ಇನ್ನಾದರೂ ಎಚ್ಚೆತ್ತು ಈ ರಸ್ತೆಯನ್ನು ಸರಿಪಡಿಸಲು ಮನವಿ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭ ಗ್ರಾಮಸ್ಥರಾದ ಬಾಚಮಂಡ ಸುಬ್ರಮಣಿ, ಪೊನ್ನಣ್ಣ ಪಿ.ಡಿ., ಬಾಚಮಂಡ ಲೋಕೇಶ್, ಪವನ್ ಮಂಜು, ಜೈನೀರ ಅಶೋಕ್, ಗನ್ನಿ, ಪಟ್ಟಚೆರುವಳಂಡ ಕಿರಣ್, ವಿಜಯ್ ಕುಮಾರ್, ಮಿಥುನ್ ನಂಜಪ್ಪ, ನಾಣಯ್ಯ, ರೇಖಾ, ಭವ್ಯ, ಗೀತಾ, ಹೇಮಲತಾ, ಶ್ರುತಿ, ರೂಪ ಮತ್ತಿತರರು ಇದ್ದರು.

- ಅಶ್ರಫ್ ಚೆಯ್ಯಂಡಾಣೆ