ಪೊನ್ನಂಪೇಟೆ, ಮಾ. ೧೫: ನಂ. ೫೧೦ನೇ ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿಯಮಿತ ಬಾಳೆಲೆಯಲ್ಲಿ ವ್ಯಾಪಾರಸ್ಥರು, ಸದಸ್ಯರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ೬೦ ಟನ್ ಸಾಮರ್ಥ್ಯವುಳ್ಳ ನೂತನ ತೂಕದ ಯಂತ್ರದ ಉದ್ಘಾಟನೆಯನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಯಂತ್ರದ ಕಚೇರಿ ಕಟ್ಟಡದ ಉದ್ಘಾಟನೆಯನ್ನು ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ರಾಜ್ಯ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರು ನೆರವೇರಿಸಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಸಹಕಾರ ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದುತ್ತಿದ್ದು, ಸಂಘದ ಸ್ವಂತ ಬಂಡವಾಳದಲ್ಲಿ ವೇವ್ ಬ್ರಿಡ್ಜ್ ನಿರ್ಮಾಣಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿಯನ್ನು ಕಂಡು ಲಾಭದಾಯಕವಾಗಿ ಬೆಳೆಯಲು ಸದಸ್ಯರು ಕೈಜೋಡಿಸುವಂತೆ ಕರೆ ನೀಡಿದರು. ಹಾಗೆಯೇ ಸಂಘಕ್ಕೆ ಅತ್ಯವಶ್ಯಕವಾದ ಕೆಲವು ಬೇಡಿಕೆಗಳನ್ನು ಆದಷ್ಟು ಶೀಘ್ರವಾಗಿ ಕಾರ್ಯಗತಗೊಳಿಸುವ ಭರವಸೆ ನೀಡಿದರು.

ವೇದಿಕೆಯಲ್ಲಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ, ಸಂಘದ ಡಿಸಿಸಿ ಬ್ಯಾಂಕ್ ನಾಮ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ, ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳು ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರುಗಳು, ಗ್ರಾಮಸ್ಥರುಗಳು ಸಿಬ್ಬಂದಿವರ್ಗ ಹಾಜರಿದ್ದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಸರ್ವರನ್ನು ಸಂಘದ ಆಡಳಿತ ಮಂಡಳಿ ನಿರ್ದೇಶಕ ಕಾಡ್ಯಮಾಡ ಉತ್ತಪ್ಪ ಸ್ವಾಗತಿಸಿದರು, ಉಪಾಧ್ಯಕ್ಷೆ ಪಿ.ಜಿ. ಜಾನಕಿ ವಂದಿಸಿದರು, ನಿರ್ದೇಶಕ ಆದೇಂಗಡ ವಿನು ಉತ್ತಪ್ಪ ನಿರೂಪಿಸಿದರು.