ಬೆಂಗಳೂರು, ಮಾ. ೧೫: ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ವಿಧಾನಸಭೆಯಲ್ಲಿ ಇಂದು ಮಾತನಾಡುತ್ತ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು. ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಕುರಿತಂತೆ ನಡೆಯುತ್ತಿದ್ದ ಚರ್ಚೆ ಸಂದರ್ಭ ತಮ್ಮ ಸರದಿ ಬಂದಾಗ ಶಾಸಕರು ಮಾತನಾಡುತ್ತಿದ್ದರು.
ನಿಗಮ ಸ್ಥಾಪನೆಗೆÀ ಈ ಹಿಂದೆ ಮನವಿ ಮಾಡಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಪ್ರಸಕ್ತ ಬಜೆಟ್ನಲ್ಲಿ ರೂ. ೧೦ ಕೋಟಿಯನ್ನು ಕೊಡವರ ಶ್ರೇಯೋಭಿವೃದ್ಧಿಗಾಗಿ ಎಂದು ಮಂಜೂರು ಮಾಡಿದ್ದಾರೆ. ನಿಜಕ್ಕೂ ಇದು ಸ್ವಾಗತಾರ್ಹ. ಆದರೆ, ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕಾದರೆ ಇನ್ನೂ ಹೆಚ್ಚಿನ ಆರ್ಥಿಕ ಮಂಜೂರಾತಿಯ ಅಗತ್ಯವಿದೆ. ಮುಖ್ಯಮಂತ್ರಿಯವರು ಮುಂದೆ ಪೂರಕ ಬಜೆಟ್ನಲ್ಲಿ ಈ ಬಗ್ಗೆ ಮಂಜೂರಾತಿ ನೀಡುವಂತೆ ಬೋಪಯ್ಯ ಕೋರಿದರು.
ಕೊಡವರು ಸೇನೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಶಿಸ್ತುಬದ್ಧ ಜೀವನ ನಡೆಸುತ್ತಿದ್ದಾರೆ. ಹಾಗೆಂದು ಎಲ್ಲರೂ ಉತ್ತಮ ಅರ್ಥಿಕ ಸ್ಥಿತಿಯಲ್ಲಿದ್ದಾರೆ ಎನ್ನುವಂತಿಲ್ಲ. ಕೊಡವರಲ್ಲಿ ಅನೇಕ ಮಂದಿ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಅವಶ್ಯಕತೆಯಿದೆ ಎಂದು ಶಾಸÀಕ ಬೋಪಯ್ಯ ಸದನದಲ್ಲಿ ಸಮರ್ಥಿಸಿದರು.
ಕೊಡಗಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯ ಅವಶ್ಯಕತೆ ಕುರಿತೂ ಸದನದ ಗಮನಕ್ಕೆ ತಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಸಾಮಾನ್ಯ ಜನರಿಗೆ ಪ್ರಯೋಜನಕಾರಿಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗಿನಲ್ಲಿ ಜೇನುಕೃಷಿಗೆ ವಿಪುಲ ಅವಕಾಶವಿದೆ. ಈ ದಿಸೆಯಲ್ಲಿ ಮುಖ್ಯಮಂತ್ರಿಯವರು ಕೊಡಗಿನ ಜೇನುಕೃಷಿ ಅಭಿವೃದ್ಧಿಗೆ ರೂ. ೫ ಕೋಟಿ ನಿಗದಿಗೊಳಿಸಿರುವುದು ನಿಜಕ್ಕೂ ಸ್ವಾಗತಾರ್ಹವಾಗಿದೆ ಎಂದರು. ಆನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಬಜೆಟ್ನಲ್ಲಿ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ರೈಲು ಹಳಿ ತಡೆಗೋಡೆ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಯವರು ರೂ. ೧೦೦ ಕೋಟಿ ನಿಗದಿಗೊಳಿಸಿರುವುದು ಹೆಚ್ಚು ಪ್ರಯೋಜನಕಾರಿಯಾಗಲಿದೆ. ಆದರೆÀ, ಈ ಮೊತ್ತವನ್ನು ರೂ. ೧ ಸಾವಿರ ಕೋಟಿಗೆ ಏರಿಸಿ ಯೋಜನೆಯನ್ನು ಪೂರ್ಣಗೊಳಿಸಿದರೆ ಆನೆ ಹಾವಳಿಯನ್ನು ಸಾಕಷ್ಟು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು. ಕೊಡಗಿನಲ್ಲಿ ಆನೆ ಮತ್ತು ಹುಲಿ ಹಾವಳಿ ನಿರಂತರವಾಗಿದೆ ಎಂಬುದನ್ನು ಗಮನಕ್ಕೆ ತಂದರು. ವೈದ್ಯಕೀಯ ಮತ್ತಿತರ ಇನ್ನೂ ಅಗತ್ಯ ವಲಯಗಳಿಗೆÀ ಮುಖ್ಯಮಂತ್ರಿಯವರು ಬಜೆಟ್ನಲ್ಲಿ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಬೋಪಯ್ಯ ಬಜೆಟ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.