ಬೆಂಗಳೂರು, ಮಾ. ೧೫: ಕೊಡಗಿನ ಜಮ್ಮಾ ಮಲೆ ಭೂಹಿಡುವಳಿದಾರರು ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಸಂದರ್ಭ ಕೊಡಗಿನ ಜನಪ್ರತಿನಿಧಿಗಳು ಹಾಜರಿದ್ದರು.
ಮನವಿಯಲ್ಲಿ ಮುಖ್ಯವಾಗಿ ಕೊಡಗಿನ ಜಮ್ಮಾ ಮಲೆ ಭೂಹಿಡುವಳಿದಾರರು ತಮ್ಮ ಸ್ವಾಧೀನದಲ್ಲಿರುವ ಪ್ರದೇಶವನ್ನು ಸರಕಾರ ಅರಣ್ಯ ಇಲಾಖೆಯ ಸ್ವಾಧೀನಕ್ಕೆ ಬಿಟ್ಟುಕೊಡಲು ತಯಾರಿದ್ದಾರೆ ಎಂಬ ಕುರಿತು ಪ್ರಸ್ತಾಪಿಸಲಾಗಿದೆ. ಆದರೆ, ಸರಕಾರ ಈ ಹಿಡುವಳಿದಾರರಿಗೆ ಸೂಕ್ತ ಪರಿಹಾರ ನೀಡುವಂತೆಯೂ ವಿನಂತಿಸಲಾಗಿದೆ. ಕೊಡಗಿನ ೫೫ ಮಂದಿ ಕುಟುಂಬಸ್ಥರು ಜಮ್ಮಾ ಭೂ ಹಿಡುವಳಿದಾರರು ತಮ್ಮ ಬಳಿಯಿರುವ ೮೪೫೦ ಎಕರೆ ಪ್ರದೇಶವನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆ. ಹಿಂದೆ ರಾಜವಂಶಸ್ಥರ ಕಾಲದಿಂದ ಈ ಪ್ರದೇಶಗಳನ್ನು ರಕ್ಷಿಸುವ ಜವಾಬ್ದಾರಿಕೆಗಾಗಿ ಈ ಕುಟುಂಬಸ್ಥರಿಗೆ ಬಿಟ್ಟುಕೊಡಲಾಗಿತ್ತು. ಆದರೆ, ಆ ಪ್ರದೇಶದಲ್ಲಿ ಏಲಕ್ಕಿ ಕೃಷಿ ಮಾಡಲು ಬಳಿಕ ಸರಕಾರ ಅವಕಾಶ ಕಲ್ಪಿಸಿತ್ತು. ಆದರೆ, ಕಾಲಕ್ರಮೇಣ ಏಲಕ್ಕಿ ಕೃಷಿ ಮಾಡಲು ಸಾಧ್ಯವಿಲ್ಲದೆ ಜಮ್ಮಾ ಮಲೆ ಭೂಹಿಡುವಳಿದಾರರು ಈ ಪ್ರದೇಶವನ್ನು ಅರಣ್ಯ ಸಹಿತ ರಕ್ಷಿಸಿಕೊಂಡು ಬಂದಿದ್ದಾರೆ. ಈಗ ಈ ಪ್ರದೇಶವನ್ನು ಸರಕಾರದ ವಶಕ್ಕೆ, ಅರಣ್ಯ ಇಲಾಖೆಯ ಸುಪರ್ದಿಗೆ ಬಿಟ್ಟುಕೊಡಲು ಸಿದ್ಧರಿದ್ಧಾರೆ. ಸರಕಾರ ಸೂಕ್ತ ಪರಿಹಾರ ಮಾತ್ರ ಅವಶ್ಯಕವಾಗಿ ನೀಡಬೇಕೆಂಬುದಷ್ಟೇ ಇವರ ಬೇಡಿಕೆಯಾಗಿದೆ.
ಮುಖ್ಯಮಂತ್ರಿಯವರು ಈ ಬಗ್ಗೆ ಪರಿಶೀಲಿಸುವದಾಗಿ ನಿಯೋಗಕ್ಕೆ ಭರವಸೆಯಿತ್ತರು.
ನಿಯೋಗದಲ್ಲಿ ಕೊಡಗು ಜಮ್ಮಾ ಮಲೆ ಭೂ ಹಿಡುವಳಿದಾರರ ಸಂಘದ ಪ್ರಮುಖರುಗಳಾದ ಉದಿಯಂಡ ಮೋಹನ್ ಪೆಮ್ಮಯ್ಯ, ನಾಟೋಳಂಡ ಪೊನ್ನಪ್ಪ, ಅಪ್ಪುಮಣಿಯಂಡ ಎಸ್. ಸೋಮಣ್ಣ, ಪೇರಿಯಂಡ ಸಾಬು, ಪೊನೋಳತಂಡ ರಘು ಹಾಗೂ ಕೊಡಗಿನ ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ ಮತ್ತು ಸುಜಾ ಕುಶಾಲಪ್ಪ ಇವರುಗಳಿದ್ದರು.