ಮಡಿಕೇರಿ, ಮಾ. ೧೫: ೧೨ ರಿಂದ ೧೪ ವರ್ಷ ವಯೋಮಾನದ ಮಕ್ಕಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವ ಅಭಿಯಾನ ತಾ.೧೬ ರಿಂದ (ಇಂದಿನಿAದ) ದೇಶದಾದ್ಯಂತ ಪ್ರಾರಂಭವಾಗಲಿದ್ದು, ಜಿಲ್ಲೆಯಲ್ಲಿಯೂ ಕೂಡ ಸಾಂಕೇತಿಕವಾಗಿ ಚಾಲನೆ ದೊರೆಯಲಿದೆ.

ಜಿಲ್ಲಾಸ್ಪತ್ರೆಯಲ್ಲಿ ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಲಸಿಕಾ ಅಭಿಯಾನದಲ್ಲಿ, ಮೊದಲ ದಿನವಾದ ಕಾರಣ ೨೦ ಮಕ್ಕಳಿಗೆ ಮಾತ್ರ ಹೈದರಾಬಾದಿನ ಬಯೊಲಾಜಿಕಲ್-ಇ ಸಂಸ್ಥೆ ಅಭಿವೃದ್ಧಿಪಡಿಸಿರುವ ಕಾರ್ಬಿವ್ಯಾಕ್ಸ್ ಲಸಿಕೆಯನ್ನು ನೀಡಲು ತೀರ್ಮಾನಿಸಲಾಗಿದ್ದು, ನಗರದ ಸಂತ ಮೈಕಲರ ಶಾಲೆಯ ೧೨ ರಿಂದ ೧೪ ವಯೋಮಾನದ ೨೦ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುವುದು. ಜಿಲ್ಲಾಧಿಕಾರಿ ಬಿ.ಸಿ ಸತೀಶ, ಜಿ.ಪಂ ಸಿ.ಇ.ಒ ಭಂವರ್ ಸಿಂಗ್ ಮೀನಾ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಆರೋಗ್ಯ ಅಧಿಕಾರಿ ವೆಂಕಟೇಶ್, ಆರ್.ಸಿ.ಎಚ್ ಅಧಿಕಾರಿ ಡಾ. ಗೋಪಿನಾಥ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಹಾಗೂ ಇತರರ ಸಮ್ಮುಖದಲ್ಲಿ ಅಭಿಯಾನಕ್ಕೆ ಚಾಲನೆ ದೊರಕಲಿದೆ.

(ಮೊದಲ ಪುಟದಿಂದ)

೧೯,೦೦೦ ಮಕ್ಕಳು

೧೨ ರಿಂದ ೧೪ ವರ್ಷ ವಯೋಮಾನದ ಸುಮಾರು ೧೯,೦೦೦ ಮಕ್ಕಳು ಜಿಲ್ಲೆಯಲ್ಲಿರುವುದಾಗಿ ಅಂದಾಜಿಸಲಾಗಿದ್ದು, ೨೦೦೮ ರಿಂದ ೨೦೧೦ ಮಾರ್ಚ್ ೧೫ ರೊಳಗೆ ಜನಿಸಿದವರು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ೧೪ ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ನೀಡಲಾಗುತ್ತದೆ., ಆದರೆ ೧೨ ರಿಂದ ೧೪ ವರ್ಷದ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ನೀಡಲಾಗುತ್ತದೆ. ೧೨ ವರ್ಷ ಪೂರೈಸದೇ ಇರುವವರು ಲಸಿಕೆ ಪಡೆಯಬಾರದು ಎಂದು ಆರ್.ಸಿ.ಎಚ್ ಅಧಿಕಾರಿ ಡಾ.ಗೋಪಿನಾಥ್ ಅವರು ಮಾಹಿತಿ ನೀಡಿದ್ದಾರೆ.

ಚಿಕ್ಕ ಮಕ್ಕಳಾಗಿರುವ ಕಾರಣ ಹಾಗೂ ನೂತನ ಲಸಿಕೆಯಾಗಿರುವುದರಿಂದ ೩, ೪ ದಿನಗಳ ಕಾಲ ಆಯ್ದ ಕೆಲವೇ ಕೆಲವು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಕರೆಸಿ ಲಸಿಕೆ ನೀಡಲಾಗುತ್ತದೆ. ನಂತರ ಶಾಲೆಗಳಲ್ಲಿಯೇ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುತ್ತದೆ. ಜಿಲ್ಲೆಗೆ ಸುಮಾರು ೧೦,೦೦೦ ಕಾರ್ಬಿವ್ಯಾಕ್ಸ್ ಲಸಿಕಾ ಡೋಸ್‌ಗಳು ಶೀಘ್ರದಲ್ಲಿ ಆಗಮಿಸಲಿದೆ. ಒಂದು ‘ವೈಲ್’ನಲ್ಲಿ ೨೦ ಡೋಸ್ ಇರುತ್ತವೆ ಎಂದು ಅವರು ತಿಳಿಸಿದ್ದಾರೆ.