ದೇವರಪುರ ತಂಡ ರನ್ನರ್ಸ್

ಗೋಣಿಕೊಪ್ಪ ವರದಿ, ಮಾ. ೧೦: ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎಂವೈಸಿ ಫ್ರೆಂಡ್ಸ್ ಆಯೋಜಿಸಿದ್ದ ಮಾಯಮುಡಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಕಪ್ ಅನ್ನು ಚೆನ್ನಂಗೊಲ್ಲಿ ಕ್ರಿಕೆಟರ್ಸ್ ತಂಡ ಗೆದ್ದುಕೊಂಡಿದ್ದು, ಹೆಚ್.ಎಂ.ಸಿ. ದೇವರಪುರ ತಂಡ ದ್ವಿತೀಯ ಸ್ಥಾನ ಗಳಿಸಿತು. ಬಾಳೆಲೆ ತಂಡ ತೃತೀಯ, ಮಾಯಮುಡಿ ಟೈಗರ್ಸ್ ಬಾಯ್ಸ್ ೪ನೇ ಸ್ಥಾನ ಪಡೆದುಕೊಂಡಿತು.

ಫೈನಲ್ ಹಣಾಹಣಿಯಲ್ಲಿ ಚೆನ್ನಂಗೊಲ್ಲಿ ತಂಡ ೧೬ ರನ್‌ಗಳಿಂದ ಗೆದ್ದು, ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿತು. ೮ ಓವರ್‌ಗಳಿಗೆ ೪ ವಿಕೆಟ್ ನಷ್ಟಕ್ಕೆ ೬೩ ರನ್ ಕಲೆ ಹಾಕಿತು. ದೇವರಪುರ ತಂಡವು ೮ ವಿಕೆಟ್ ಕಳೆದುಕೊಂಡು ೪೭ ರನ್ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು.

ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಬಾಳೆಲೆ ವಾರಿಯರ್ಸ್ ತಂಡವು ೯ ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿ ೪ ಓವರ್‌ಗಳಿಗೆ ೧ ವಿಕೆಟ್ ಕಳೆದುಕೊಂಡು ೨೯ ರನ್ ಕಲೆಹಾಕಿತು. ಮಾಯಮುಡಿ ಟೈಗರ್ಸ್ ಬಾಯ್ಸ್ ೪ ವಿಕೆಟ್ ಕಳೆದುಕೊಂಡು ೨೩ ರನ್ ಗಳಿಸಿತು.

೩ ದಿನ ನಡೆದ ಟೂರ್ನಿಯಲ್ಲಿ ೮ ತಂಡಗಳು ಸೆಣೆಸಾಟ ನಡೆಸಿದವು. ಸ್ಥಳೀಯರಾದ ಬಲ್ಯಂಡ ಪ್ರತಾಪ್, ಸಣ್ಣುವಂಡ ಎಂ. ಸುರೇಶ್, ಚೆಪ್ಪುಡೀರ ಕೆ. ಪ್ರದೀಪ್, ಆಪಟ್ಟೀರ ಬೋಪಣ್ಣ, ಟಾಟು ಮೊಣ್ಣಪ್ಪ, ಕಾಳಪಂಡ ಬೋಪಣ್ಣ, ಸರ್ಪುದ್ದೀನ್, ಪುಚ್ಚಿಮಾಡ ರಾಯ್ ಬಹುಮಾನ ವಿತರಣೆ ಮಾಡಿದರು.

ಎಂವೈಸಿ ಫ್ರೆಂಡ್ಸ್ ಪ್ರಮುಖರಾದ ಜಮ್ಷಿ, ಜಗ, ಆರ್ಫಿನ್, ಜೀವನ್, ಮೆಹರೂಫ್, ಕಾರ್ತಿಕ್, ಶಕೀರ್, ಕವನ್ ಇತರರು ಇದ್ದರು.