ಕುಶಾಲನಗರ, ಮಾ. ೧೦: ಕುಶಾಲನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪದವಿ ಮತ್ತು ಪಿಯು ವಿದ್ಯಾರ್ಥಿಗಳ ತಂಡಗಳ ನಡುವೆ ವಾಲಿಬಾಲ್ ಪಂದ್ಯಾಟ ನಡೆಯಿತು.
ಪಂದ್ಯಾಟವನ್ನು ಪತ್ರಕರ್ತ ಎಂ.ಎನ್. ಚಂದ್ರಮೋಹನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸಾಮರ್ಥ್ಯವನ್ನು ಹೊರಗೆಡವಲು ಸಾಧ್ಯ ಎಂದರು. ಪಂದ್ಯಾಟದಲ್ಲಿ ಕಾಲೇಜಿನ ಪಿಯು ಮತ್ತು ಪದವಿ ವಿಭಾಗದ ೮ ತಂಡಗಳು ಪಾಲ್ಗೊಂಡಿದ್ದವು.
ಇದೇ ಸಂದರ್ಭ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾದ ಫಾತಿಮಾ ಕಾನ್ವೆಂಟ್ ಆಂಗ್ಲಮಾಧ್ಯಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಗಾಯತ್ರಿ ಮತ್ತು ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಮೋಹನ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಮೆಮೋರಿಯಲ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಲಿಖಿತ, ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲರಾದ ಕ್ಲಾರಾ ರೇಷ್ಮಾ, ವಿವೇಕಾನಂದ ವಿದ್ಯಾಸಂಸ್ಥೆಯ ಪ್ರಮುಖರಾದ ಮಹೇಶ್ ಅಮಿನ್ ಮತ್ತು ನಂಜಪ್ಪ ಹಾಗೂ ಕಾಲೇಜಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಇದ್ದರು.