ಚೆಯ್ಯಂಡಾಣೆ, ಮಾ. ೭: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದ ಸಮೀಪವಿದ್ದ ಕಾಡಿನಿಂದ ಕೂಡಿದ ಜಾಗದಲ್ಲಿ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ತರಕಾರಿ ಗಿಡಗಳನ್ನು ನೆಡುವುದರ ಮೂಲಕ ನೆನೆಗುದಿಗೆ ಬಿದ್ದಿದ್ದ ಸ್ಥಳ ತರಕಾರಿ ಗಿಡಗಳಿಂದ ಅಲಂಕರಿಸಲ್ಪಟ್ಟಿದೆ.
ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನಿಸರ್ಗ ಇಕೋ ಕ್ಲಬ್ ತಂಡ ಇದಕ್ಕೆ ಸಹಕಾರಿಯಾಗಿದ್ದು ವಿಶೇಷ. ಗಿಡಗಳ ಆರೈಕೆಗೆ ಬೇಕಾದ ಎಲ್ಲಾ ರೀತಿಯ ಉಪಕರಣಗಳನ್ನು ಖರೀದಿಸಿ ಮಾದರಿಯಾಗಿದ್ದಾರೆ. ಪುಟಾಣಿ ವಿದ್ಯಾರ್ಥಿಗಳು ತರಕಾರಿ ತೋಟದಲ್ಲಿ ಅವರೆಕಾಳು, ಬೀನ್ಸ್, ಮೂಲಂಗಿ, ಟೊಮೇಟೊ, ಬಾಳೆ, ಮೆಣಸು ಹಾಗೂ ಇನ್ನಿತರ ಹಲವಾರು ಗಿಡಗಳನ್ನು ನೆಟ್ಟು ಅವು ಫಸಲನ್ನು ಕೂಡ ನೀಡುತ್ತಿವೆ. ಇಲ್ಲಿ ವಿಶೇಷವೆಂದರೆ ಗಿಡಗಳಲ್ಲಿ ಸಿಗುವಂತಹ ತರಕಾರಿಗಳನ್ನು ಶಾಲೆಯಲ್ಲಿನ ಅಕ್ಷರ ದಾಸೋಹಕ್ಕೆ ಬಳಸಲಾಗುತ್ತಿದೆ.
ಇದಕ್ಕೆ ಬೇಕಾದ ನೀರಿನ ಸೌಲಭ್ಯಕ್ಕೆ ಪೈಪ್ ಕೂಡ ವಿದ್ಯಾರ್ಥಿಗಳೇ ಅಳವಡಿಸಿದ್ದು ಮತ್ತು ತೋಟದ ಪಕ್ಕದಲ್ಲೇ ನೀರಿನ ಇಂಗು ಗುಂಡಿ ತೋಡಿದ್ದು ವಿಶೇಷವಾಗಿದೆ. ನೀರನ್ನು ಸಂರಕ್ಷಿಸುವ ಗುಂಡಿ ಹಾಗೂ ನೀರನ್ನು ತರಕಾರಿ ಗಿಡಗಳಿಗೆ ಸಿಂಪಡಿಸುವ ಸ್ಪಿçಂಕ್ಲರ್ ಜೆಟ್ ಅನ್ನು ಅಳವಡಿಸಿ ಗಿಡಗಳಿಗೆ ನೀರನ್ನು ಚಿಮ್ಮುವಂತೆ ಸೌಲಭ್ಯ ಕೂಡ ಕಲ್ಪಿಸಲಾಗಿದೆ.
ಇದಕ್ಕೆಲ್ಲ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರ ಸಹಕಾರ ಇದುದ್ದರಿಂದ ನಾವು ಈ ತರಕಾರಿ ತೋಟ ನಿರ್ಮಾಣ ಮಾಡಲು ಸಹಕಾರಿಯಾಗಿದೆ. ನಮಗೆ ಗಿಡನೆಡುವ ರೀತಿ, ಯಾವ ಗಿಡ ಯಾವ ರೀತಿ ನೆಡಬೇಕು, ಅದರಿಂದ ನಮಗೆ ಯಾವ ಪ್ರಾಯೋಜನ ಇದೆ ಎಂಬುದು ತಿಳಿಯಲು ಶಿಕ್ಷಕರು ಸಹಕರಿಸಿದರು ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಹೊರತರಲು ಈ ತರದ ಚಟುವಟಿಕೆಗಳಿಗೆ ಆದÀ್ಯತೆ ನೀಡುತ್ತಿದ್ದು, ಓದಿನಿಂದ ಮಾತ್ರ ವಿದ್ಯಾರ್ಥಿಗಳು ಜೀವನ ಸಾಧಿಸಲು ಸಾಧ್ಯ ಎಂಬ ಭಾವನೆಯಿಂದ ಹೊರಬರಬೇಕಿದೆ ಎಂದು ಶಿಕ್ಷಕರು ಅಭಿಪ್ರಾಯಿಸಿದ್ದಾರೆ.
-ಅಶ್ರಫ್ ಚೆಯ್ಯಂಡಾಣೆ