ಶನಿವಾರಸಂತೆ, ಮಾ. ೫: ಸಮೀಪದ ಕಣಿವೆ ಬಸವನಹಳ್ಳಿ ಗ್ರಾಮದ ರಸ್ತೆಯಲ್ಲಿ ಬೈಕ್‌ಗೆ ಲಾರಿ ಡಿಕ್ಕಿಪಡಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.

ಕೂಡುಮಂಗಳೂರಿನ ಕಾಫಿ ಕ್ಯೂರಿಂಗ್ ವರ್ಕ್ಸ್ ಉದ್ಯೋಗಿ ಶೇಖರ್ (೩೨) ಮೃತಪಟ್ಟ ಸವಾರ. ಗುರುವಾರ ರಾತ್ರಿ ಶೇಖರ್ ತನ್ನ ಪತ್ನಿ ಕೃತಿಕಾ (೨೧), ಪುತ್ರ ಪ್ರಶಾಂತ್ (೨)ರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಸ್ವಗ್ರಾಮ ಕಬ್ಬಿನಗದ್ದೆಗೆ ಬರುತ್ತಿರುವಾಗ ಅಪಘಾತ ಸಂಭವಿಸಿದೆ. ಕೊಡ್ಲಿಪೇಟೆಯಿಂದ ಬರುತ್ತಿದ್ದ ಲಾರಿ ಬೈಕ್‌ಗೆ ಡಿಕ್ಕಿಯಾದ ತಕ್ಷಣ ಆಯತಪ್ಪಿದ ಶೇಖರ್ ಲಾರಿಯ ಹಿಂಬದಿ ಚಕ್ರದ ಅಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ ಕೃತಿಕಾ ಗಾಯಗೊಂಡಿದ್ದು, ಮಗು ಪ್ರಶಾಂತ್ ಸುರಕ್ಷಿತವಾಗಿದೆ.

ಅಪಘಾತ ಸುದ್ದಿ ತಿಳಿದ ತಕ್ಷಣ ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ, ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಸಿಬ್ಬಂದಿ ಬೋಪಯ್ಯ, ಸೋಮಶೇಖರ್, ಲೋಕೇಶ್, ಶಶಿಕುಮಾರ್, ಮುರಳಿ ಇತರರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಶೇಖರನ ಮೃತ ದೇಹದ ಮರಣೋತ್ತರ ಪರೀಕ್ಷೆಗಾಗಿ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಸಾಗಿಸಲಾಯಿತು. ಪತ್ನಿ ಕೃತಿಕಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳು ಕೃತಿಕಾ ತಂದೆ ರಮೇಶ್ ಶುಕ್ರವಾರ ಲಾರಿ ಚಾಲಕ ಪುಟ್ಟ ವಿರುದ್ಧ ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.