ಮಡಿಕೇರಿ, ಮಾ. ೪: ಕೊಡಗು ಜಿಲ್ಲೆಗೆ ಹಾಗೂ ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ದಿನ ಮಂಡಿಸಿದ ಬಜೆಟ್ ಅತ್ಯಂತ ಆಶಾದಾಯಕವಾಗಿದೆ. ಸರ್ವವ್ಯಾಪಿ, ಸರ್ವ ಹಿತದೃಷ್ಟಿಯ ಮುಂಗಡಪತ್ರವಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ‘ಶಕ್ತಿ’ಯೊಂದಿಗೆ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಗೆ ಸರಕಾರದಿಂದಲೇ ನೂತನ ವಿಶ್ವವಿದ್ಯಾಲಯ ಮಂಜೂರಾಗಿದೆ. ಜೇನು ಕೃಷಿ ಬೆಳವಣಿಗೆಗೆ ರೂ. ೫ ಕೋಟಿ ನಿಗದಿಗೊಳಿಸಲಾಗಿದೆ. ಕೊಡವ ಜನಾಂಗದ ಶ್ರೇಯೋಭಿವೃದ್ಧಿಗೆ ರೂ. ೧೦ ಕೋಟಿ ಇರಿಸಿದ್ದು, ಈ ಮೂಲಕ ಬಹು ವರ್ಷಗಳ ಬೇಡಿಕೆಯಾದ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅವಕಾಶ ಕಲ್ಪಿಸಿದಂತಾಗಿದೆ. ಮಡಿಕೇರಿಗೆ ಹೆಲಿಪೋರ್ಟ್ ಮಂಜೂರಾಗಿದೆ. ಆನೆ ಹಾವಳಿ ತಡೆಗಟ್ಟಲು ಕೊಡಗು ಸೇರಿದಂತೆ ೩ ಜಿಲ್ಲೆಗಳಿಗೆ ರೂ. ೧೦೦ ಕೋಟಿಯನ್ನು ಮೀಸಲಿರಿಸಲಾಗಿದೆ ಎಂದು ಶಾಸಕ ರಂಜನ್ ವಿವರಿಸಿದರು.
ಇದಲ್ಲದೆ ರಾಜ್ಯಮಟ್ಟದಲ್ಲಿ ವೃದ್ಧಾಪ್ಯ ವೇತನವನ್ನು ರೂ. ೬೦೦ರಿಂದ ೮೦೦ಕ್ಕೆ ಏರಿಸಲಾಗಿದೆ. ಆಶಾ ಕಾರ್ಯಕರ್ತರಿಗೆ ರೂ. ೧ ಸಾವಿರ ಹೆಚ್ಚಿಸಲಾಗಿದೆ. ಗ್ರಾಮಸೇವಕರಿಗೆ ರೂ. ೨ ಸಾವಿರ ಹೆಚ್ಚಿಸಲಾಗಿದೆ. ಅಲ್ಲದೆ, ಅಂಗನವಾಡಿ ಕಾರ್ಯಕರ್ತರಿಗೆ ರೂ. ೧೨೫೦ ಹೆಚ್ಚು ಮಾಡಲಾಗಿದೆ.
ಇದರೊಂದಿಗೆ ಸಾಮಾನ್ಯ ಜನರಿಗೆ ಅನುಕೂಲಕರವಾಗುವಂತೆ ಕಂದಾಯ ಇಲಾಖೆಯ ದಾಖಲಾತಿಗಳನ್ನು ಮನೆಮನೆಗೆ ತಲುಪಿಸುವ ಯೋಜನೆ ರೂಪಿಸಲಾಗಿದೆ. ಸಾಲ ಪಡೆದುಕೊಳ್ಳಲು ನೋಂದಾವಣಾ ಕಚೇರಿಗೆ ತೆರಳಿ ನೋಂದಾವಣೆ ಮಾಡುವುದನ್ನು ತಪ್ಪಿಸಿ ನೂತನ ಪೋರ್ಟಲೊಂದನ್ನು ಹುಟ್ಟುಹಾಕಲಾಗಿದೆ. ಆ ಮೂಲಕ ಬೊಮ್ಮಾಯಿ ಸರಕಾರ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ವಿಶೇಷ ಹೆಜ್ಜೆಯಿರಿಸಿದೆ ಎಂದು ರಂಜನ್ ಅಭಿಪ್ರಾಯಪಟ್ಟರು. ಈ ಬಾರಿ ೨,೬೫,೭೨೦ ಕೋಟಿ ಬೃಹತ್ ಗಾತ್ರದ ಬಜೆಟ್ ಮಂಡಿಸಿರುವುದು ವಿಶೇಷ ಎಂದು ಬಣ್ಣಿಸಿದ್ದಾರೆ.