ಕುಶಾಲನಗರ, ಮಾ. ೫: ಕೊಡಗು ಜಿಲ್ಲೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಪೂರಕವಾಗಿ ಅಗತ್ಯ ಸಹಕಾರ ನೀಡುವುದಾಗಿ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಡಿನ ಕಲೆ, ಆಚಾರ - ವಿಚಾರಗಳನ್ನು ಸಂರಕ್ಷಿಸುವ ಕೆಲಸ ಸಾಹಿತ್ಯ ಪರಿಷತ್ತಿನಿಂದ ಆಗಬೇಕಿದೆ ಎಂದು ಹೇಳಿದರು. ಕುಶಾಲನಗರದ ಕಲಾ ಭವನದ ಅಪೂರ್ಣಗೊಂಡ ಕಾಮಗಾರಿಯನ್ನು ಪೂರ್ಣಗೊಳಿಸಿ ಆದಷ್ಟು ಬೇಗ ಸಾಹಿತ್ಯ ಸೇವೆಗೆ ನೀಡಲು ಕ್ರಮಕೈಗೊಳ್ಳಲಾಗುವುದು.

ಕುಶಾಲನಗರ ತಾಲೂಕು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಸೂಕ್ತ ನಿವೇಶನ ಒದಗಿಸುವ ಭರವಸೆಯನ್ನು ನೀಡಿದ ಶಾಸಕ ರಂಜನ್, ಪರಿಷತ್ತಿನ ಚಟುವಟಿಕೆಗಳಿಗೆ ಉಚಿತವಾಗಿ ಕಟ್ಟಡ ನೀಡಿರುವ ಹಿರಿಯರಾದ ಬಿ.ಆರ್. ನಾರಾಯಣ ಅವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತಿನ ಕಟ್ಟಡ ನಿರ್ಮಾಣಕ್ಕೆ ಮೀಸಲಿಟ್ಟ ನಿವೇಶನದಲ್ಲಿ ಸೂಕ್ತ ಕಟ್ಟಡ ನಿರ್ಮಾಣ ಮಾಡಬೇಕಿದೆ.

ಹಾಗೆಯೇ ಕುಶಾಲನಗರದಲ್ಲಿ ಕಲಾಭವನ ಸಾಹಿತ್ಯ ಚಟುವಟಿಕೆಗಳಿಗೆ ನಿಲುಕಬೇಕಿದೆ. ಆದ್ದರಿಂದ ಶಾಸಕ ರಂಜನ್ ಈ ನಿಟ್ಟಿನಲ್ಲಿ ಗಮನಹರಿಸಬೇಕೆಂದು ಕರೆಕೊಟ್ಟರು.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾವಣೆ ಹಾಗೂ ರಸ್ತೆಗಳಿಗೆ ಕವಿ, ಸಾಹಿತಿಗಳ ನಾಮಕರಣ ಮಾಡಿರುವ ಕುರಿತು ಅಲ್ಲಿನ ಗ್ರಾಮ ಪಂಚಾಯಿತಿಯ ಕ್ರಮವನ್ನು ರಮೇಶ್ ಶ್ಲಾಘಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಮೂರ್ತಿ, ಸಾಹಿತ್ಯ ಪರಿಷತ್ತನ್ನು ಗ್ರಾಮಗಳೆಡೆಗೆ, ಗಿರಿಜನ ಹಾಡಿಗಳೆಡೆಗೆ ಕೊಂಡೊಯ್ಯಲಾಗುವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಗೆ ಉಚಿತವಾಗಿ ಕೊಠಡಿಯನ್ನು ನೀಡಿದ ಕಟ್ಟಡದ ಮಾಲೀಕ ಬಿ.ಎನ್. ಶ್ರೀಧರ್ ಹಾಗೂ ಹಿರಿಯರಾದ ಬಿ.ಆರ್. ನಾರಾಯಣ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಎಂಪಿ., ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ, ಉಪಾಧ್ಯಕ್ಷೆ ಸುರಯ್ಯ ಭಾನು, ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್, ಜಿಲ್ಲಾ ಕಸಾಪ ಕೋಶಾಧಿಕಾರಿ ಜೋಯಪ್ಪ, ಜಿಲ್ಲಾ ನಿರ್ದೇಶಕರಾದ ಫ್ಯಾನ್ಸಿ ಮುತ್ತಣ್ಣ, ಟಿ.ಜಿ. ಪ್ರೇಮಕುಮಾರ್, ಮೆ.ನಾ. ವೆಂಕಟನಾಯಕ್, ಕೆ.ಎಸ್. ಮಹೇಶ್, ಕೆ.ಎನ್. ದೇವರಾಜು ಮತ್ತಿತರರು ಇದ್ದರು.

ಕುಶಾಲನಗರ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಎಸ್. ನಾಗರಾಜು ಸ್ವಾಗತಿಸಿದರೆ, ಶಿಕ್ಷಕ ಟಿ.ಬಿ. ಮಂಜುನಾಥ್ ನಿರೂಪಿಸಿದರು. ಕಸಾಪ ಕೋಶಾಧಿಕಾರಿ ಕೆ.ವಿ. ಉಮೇಶ ವಂದಿಸಿದರು. ಭರತ ನಾಟ್ಯ ಕಲಾವಿದೆ ಮಂಜುಭಾರ್ಗವಿ ತಂಡ ನಾಡÀಗೀತೆ ಪ್ರಸ್ತುತ ಪಡಿಸಿತು.