ಕುಶಾಲನಗರ, ಮಾ. ೩: ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಬಾಗಲಕೋಟೆ ನಗರದಲ್ಲಿ ನಡೆದ ರಾಜ್ಯಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಜಿಲ್ಲೆಯ ಕುಶಾಲನಗರ ಫಾತಿಮ ಕಾನ್ವೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೧೦ನೇ ತರಗತಿಯ ಕೆ. ಗಾಯಿತ್ರಿ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ವತಿಯಿಂದ ಬಾಗಲಕೋಟೆಯಲ್ಲಿ ಬಸವೇಶ್ವರ ವಿದ್ಯಾವರ್ಧಕ ಸಂಘದ ಎಂ.ಬಿ.ಎ. ಕಾಲೇಜಿನಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ ರಾಜ್ಯಮಟ್ಟದ ಯುವ ವಿಜ್ಞಾನಿ ಸಮ್ಮೇಳನದಲ್ಲಿ ಗಾಯಿತ್ರಿ ಯುವ ವಿಜ್ಞಾನಿ ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿ ಪತ್ರ, ಸ್ಮರಣಿಕೆಯೊಂದಿಗೆ ರೂ. ೧೦ ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗಿದೆ. ಯುವ ವಿಜ್ಞಾನಿಗಳಿಗೆ ಸ್ಪರ್ಧೆಯ ರಾಜ್ಯ ಸಂಯೋಜಕಿ ಮೀನಾಕ್ಷಿ ಶಿವಾನಂದ ಪ್ರಶಸ್ತಿ ಪತ್ರ ವಿತರಿಸಿದರು.
ಯುವ ವಿಜ್ಞಾನಿ ಪ್ರಶಸ್ತಿ ಪಡೆದಿರುವ ಕುಶಾಲನಗರ ಫಾತಿಮ ಕಾನ್ವೆಂಟ್‌ನ ವಿದ್ಯಾರ್ಥಿನಿ ಕೆ. ಗಾಯತ್ರಿ "ಸೋಲಾರ್ ಶಕ್ತಿಯಿಂದ ಪಾರ್ಥೇನಿಯಂ ಗಿಡವನ್ನು ನಿರ್ಮೂಲನೆ" ಎಂಬ ವಿಷಯದ ಕುರಿತು ವೈಜ್ಞಾನಿಕ ಯೋಜನೆಯನ್ನು ಮಂಡಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ.
ವಿದ್ಯಾರ್ಥಿನಿ ಗಾಯಿತ್ರಿ ಕುಶಾಲನಗರ ಪಟ್ಟಣದ ಹೌಸಿಂಗ್ ಬೋರ್ಡ್ನ ಕೆ. ಕಾರ್ತೀಶನ್ ಮತ್ತು ಶಿಕ್ಷಕಿ ಫ್ಲಾರೆನ್ಸ್ ದಂಪತಿ ಪುತ್ರಿ.