ಮಡಿಕೇರಿ, ಮಾ. ೩: ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಫೆ. ೨೭ ರಂದು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೆಚ್.ವಿ. ದೇವದಾಸ್ ಅವರು ದ.ಸಂ. ಸಮಿತಿ ವತಿಯಿಂದ ನಡೆಯುತ್ತಿರುವ ೩೩ನೇ ವರ್ಷದ ಸನ್ಮಾನ ಕಾರ್ಯಕ್ರಮ ಇದಾಗಿದ್ದು, ಸನ್ಮಾನ ಪಡೆದುಕೊಂಡ ವಿದ್ಯಾರ್ಥಿಗಳು ಸಮಾಜದ ಮುಖ್ಯ ವಾಹಿನಿಗೆ ಬಂದ ನಂತರ ಸಮಾಜದಿಂದ ಪಡೆದುಕೊಂಡಿದ್ದನ್ನು ಸಮಾಜಕ್ಕೆ ಮರಳಿ ಕೊಡುವ ಮನೋಭಾವನೆ ಹೊಂದಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಲಕ್ಷಿö್ಮ ಚಂದ್ರಶೇಖರ್ ಮಾತನಾಡಿ ದಲಿತರಲ್ಲಿ ಬಹಳಷ್ಟು ಬುದ್ಧಿವಂತ ವಿದ್ಯಾರ್ಥಿಗಳಿದ್ದು ಮೀಸಲಾತಿ ಮೂಲಕ ಹುದ್ದೆ ಪಡೆದುಕೊಳ್ಳಲು ಸಾಧ್ಯವಾಗದಿದ್ದರೂ ಸಾಮಾನ್ಯ ವರ್ಗದಲ್ಲಿ ಭಾಗವಹಿಸಿ ಹುದ್ದೆ ಪಡೆಯಲು ಪ್ರಯತ್ನಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಅನಂತರ ಮಾತನಾಡಿದ ಅಂಚೆಪಾಲಕ ಶ್ರೀನಿವಾಸ್ ಟಿ.ಪಿ. ವಿದ್ಯೆ ಮತ್ತು ಜ್ಞಾನದ ಮಧ್ಯೆ ಬಹಳಷ್ಟು ವ್ಯತ್ಯಾಸವಿದ್ದು, ವಿದ್ಯೆಯನ್ನು ಪುಸ್ತಕದಿಂದ ಪಡೆದರೆ ಜ್ಞಾನವನ್ನು ಸಮಾಜದಲ್ಲಿ ಆಗುವಂತಹ ಅನುಭವದಿಂದ ಸಂಪಾದಿಸಬೇಕು. ಈಗಿನ ಕಾಲಘಟ್ಟದಲ್ಲಿ ವಿದ್ಯೆಗಿಂತ ಜ್ಞಾನ ಬಹಳಷ್ಟು ಮುಖ್ಯವೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ ಮಾತನಾಡಿ, ಅಂಬೇಡ್ಕರ್ ಅವರ ಹೋರಾಟದ ಇತಿಹಾಸವನ್ನು ತಿಳಿಯುವ ಮೂಲಕ ನಾವು ಅವರಿಗೆ ಗೌರವ ಸೂಚಿಸುವುದು ನಮ್ಮ ಮೊದಲ ಕರ್ತವ್ಯವಾಗಿದ್ದು, ದಲಿತ ಸಮುದಾಯದ ಬದಲಾವಣೆಗೆ ನಮ್ಮ ವಿದ್ಯೆಯನ್ನು ಮತ್ತು ಜ್ಞಾನವನ್ನು ಬಳಸಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕನ್ನಿಕಾ ಮತ್ತು ನಿರ್ಮಲಾ, ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ, ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷಿö್ಮ ಚಂದ್ರಶೇಖರ್ ಅವರಿಗೆ ಕೊಡಗಿನಾದ್ಯಂತ ಆಧುನಿಕ ಗ್ರಂಥಾಲಯ ನಿರ್ಮಾಣಕ್ಕಾಗಿ ಶ್ರಮಿಸಿದ ಸಲುವಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅತಿಥಿಗಳೆಲ್ಲರೂ ಸೇರಿ ಸುಮಾರು ಎಂಬತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಸಂತೋಷ್ ಮತ್ತು ಸದಸ್ಯರಾದ ಸ್ಮಿತ ನಿರೂಪಿಸಿದರೆ, ಮೇಘ ಸ್ವಾಗತಿಸಿ, ತೃಪ್ತಿ ವಂದಿಸಿದರು.