ಸೋಮವಾರಪೇಟೆ, ಮಾ. ೩: ಸಮೀಪದ ಶಾಂತಳ್ಳಿ ಗ್ರಾಮ ಪಂಚಾಯಿತಿಯ ಮುಂದಿನ ಸಾಲಿನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸದಸ್ಯೆಯಾಗಿರುವ ಜಯಮ್ಮ ಬಿದ್ದಪ್ಪ ಅವರು ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರು ಮೈತ್ರಿಯಾಗಿ ಆಡಳಿತ ಮಂಡಳಿ ರಚಿಸಿದ್ದು, ಈ ಹಿಂದೆ ಏರ್ಪಟ್ಟಿದ್ದ ಒಡಂಬಡಿಕೆ ಯಂತೆ ಪ್ರಥಮ ಅವಧಿಯ ೧೦ ತಿಂಗಳು ಕಾಂಗ್ರೆಸ್, ಉಳಿದ ೨೦ ತಿಂಗಳು ಜೆಡಿಎಸ್ ಬೆಂಬಲಿತರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಅದರಂತೆ ಪ್ರಥಮ ಅವಧಿಯಲ್ಲಿ ೧೦ ತಿಂಗಳು ಕಾಂಗ್ರೆಸ್ನ ಸವಿತ ಅವರು ಅಧ್ಯಕ್ಷೆಯಾಗಿದ್ದರು. ಇದೀಗ ಉಳಿದ ೨೦ ತಿಂಗಳ ಅವಧಿಗೆ ಜೆಡಿಎಸ್ ಬೆಂಬಲಿತ ಸದಸ್ಯೆಯಾಗಿರುವ ಜಯಮ್ಮ ಅವರು ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭ ಉಪಾಧ್ಯಕ್ಷೆ ಬೇಬಿ, ಸದಸ್ಯರುಗಳಾದ ತ್ರಿಶೂಲ್, ರಂಜಿತ, ಚಂಗಪ್ಪ, ಕಾಂಗ್ರೆಸ್ ಮುಖಂಡ ಕೆ.ಎಂ. ಲೋಕೇಶ್, ಜೆಡಿಎಸ್ ಮುಖಂಡ ಬಗ್ಗನ ಅನಿಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.