ಸೋಮವಾರಪೇಟೆ, ಮಾ. ೩: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆಯು ಸ್ಥಳೀಯ ಮಾನಸ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಜಿ. ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಪಟ್ಟಣದ ಕ್ಲಬ್ ರಸ್ತೆಯಲ್ಲಿ ಸಂಘಕ್ಕೆ ನಿವೇಶನ ಖರೀದಿಸಿದ್ದು, ಕಟ್ಟಡ ನಿರ್ಮಾಣ ಕಾರ್ಯವನ್ನು ತುರ್ತು ಪ್ರಾರಂಭಿಸುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ಟೆಂಡರ್ ಕರೆಯುವಂತೆ ತೀರ್ಮಾನಿಸ ಲಾಯಿತು. ಸಂಘದ ಸದಸ್ಯರಾಗಿದ್ದು, ಸತತ ೩ ವರ್ಷಗಳಿಂದ ವಾರ್ಷಿಕ ವಂತಿಕೆ ಪಾವತಿಸದೇ ಇರುವವರನ್ನು ಸಂಘದಿAದ ಕೈಬಿಡುವಂತೆ ನಿರ್ಧರಿಸಲಾಯಿತು.
ಕಳೆದ ಹಲವು ದಶಕಗಳಿಂದ ಮೋಟಾರ್ ಯೂನಿಯನ್ ವತಿಯಿಂದ ಅದ್ದೂರಿಯಾಗಿ ಆಯುಧ ಪೂಜೋತ್ಸವ ಆಚರಿಸಲಾಗುತ್ತಿತ್ತು. ಆದರೆ ಕಳೆದ ೩ ವರ್ಷಗಳಿಂದ ಕೋವಿಡ್ ಹಿನ್ನೆಲೆ ಆಚರಣೆಗಳು ನಡೆದಿಲ್ಲ. ಪ್ರಸಕ್ತ ವರ್ಷ ಕೋವಿಡ್ ಆತಂಕ ದೂರವಾದರೆ ಮತ್ತೆ ಅದ್ದೂರಿಯಾಗಿ ಆಯುಧ ಪೂಜೋತ್ಸವ ನಡೆಸಲಾಗುವುದು ಎಂದು ಅಧ್ಯಕ್ಷ ಸುರೇಶ್ ಹೇಳಿದರು.
ಈಗಾಗಲೇ ಸಂಘದ ಸದಸ್ಯರು ಮೃತಪಟ್ಟರೆ ೧೦ ಸಾವಿರ ರೂಪಾಯಿ ಮರಣ ನಿಧಿ, ೩ ಸಾವಿರ ರೂಪಾಯಿ ವೈದ್ಯಕೀಯ ನೆರವು ಒದಗಿಸಲಾಗುತ್ತಿದ್ದು, ಇದನ್ನು ಹಾಗೆಯೇ ಮುಂದುವರೆಸುವ ಬಗ್ಗೆ ತೀರ್ಮಾನಿಸಲಾಯಿತು.
ಸಂಘದ ಕಾರ್ಯದರ್ಶಿ ಯನ್ನಾಗಿ ವಿನ್ಸಿ ಪಿಂಟೋ ಅವರನ್ನು ನೇಮಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾರ್ಯದರ್ಶಿ ಇಬ್ರಾಹಿಂ, ಖಜಾಂಚಿ ಮಣಿ ಕುಶಾಲಪ್ಪ, ಸಹ ಕಾರ್ಯದರ್ಶಿ ಕೃಷ್ಣ, ಮಾಜೀ ಅಧ್ಯಕ್ಷ ಭರತ್, ಸಿ.ಸಿ. ನಂದ, ಎ.ಪಿ. ವೀರರಾಜು, ಹಾಲಪ್ಪ, ಶೇಷಪ್ಪ, ರಂಗಸ್ವಾಮಿ, ದೀಪಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.