*ಗೋಣಿಕೊಪ್ಪಲು, ಫೆ. ೨೩: ಕೀರೆಹೊಳೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಕ್ಷಣ ದಿಂದಲೇ ಆರಂಭಿಸಲಾಗುವುದು ಎಂದು ಪೊನ್ನಂಪೇಟೆ ತಹಶೀಲ್ದಾರ್ ಎನ್.ಎಸ್. ಪ್ರಸಾದ್ ಹೇಳಿದರು.
ಪಟ್ಟಣದ ಕೀರೆಹೊಳೆ ಮತ್ತು ಬೈಪಾಸ್ ರಸ್ತೆ ತೋಡು ಒತ್ತುವರಿ ಜಾಗ ವೀಕ್ಷಿಸಿದ ಬಳಿಕ ಕಾವೇರಿ ಜಲಮೂಲ ಸಂರಕ್ಷಣಾ ಹೋರಾಟ ವೇದಿಕೆ ಪದಾಧಿಕಾರಿಗಳ ಜತೆ ಮಾತನಾಡಿದ ಅವರು, ತೊರೆ-ತೋಡು ನದಿಮೂಲ ಹಾಗೂ ಸರ್ಕಾರದ ಆಸ್ತಿ ಪಾಸ್ತಿಗಳನ್ನು ಕಾಪಾಡುವುದು ಕಂದಾಯ ಇಲಾಖೆಯ ಜವಾಬ್ದಾರಿಯಾಗಿದೆ. ಪಟ್ಟಣದಲ್ಲಿ ಒತ್ತುವರಿಯಾಗಿರುವ ಕೀರೆಹೊಳೆ ಒತ್ತುವರಿ ತೆರವು ಕಾರ್ಯ ವನ್ನು ಸರ್ಕಾರದ ಕಾನೂನಿನಂತೆ ತಕ್ಷಣದಿಂದಲೇ ಆರಂಭಿಸಲಾಗುವುದು ಎಂದು ತಿಳಿಸಿದರು.
ಒತ್ತುವರಿದಾರರು ಸ್ವಯಂ ಇಚ್ಚೆಯಿಂದ ತೆರವುಗೊಳಿಸುವಂತೆ ಸೂಚಿಸಲಾಗುವುದು. ಒಂದು ವೇಳೆ ಇದಕ್ಕೆ ಸ್ಪಂದಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಜಾಗ ಯಾರೊಬ್ಬರ ಸ್ವತ್ತಾಗಬಾರದು ಎಂದು ತಿಳಿಸಿದರು.
ಒತ್ತುವರಿ ತೆರವು ಗೊಳಿಸಲು ಹೈಕೋರ್ಟ್ ಒಂದು ತಿಂಗಳ ಕಾಲ ಕಾಲಾವಕಾಶ ನೀಡಿದ್ದರಿಂದ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿ ಸಲಾಗಿತ್ತು. ಇದೀಗ ತಾವೂ ಕೀರೆಹೊಳೆ ಒತ್ತುವರಿ ಬಗ್ಗೆ ದೀರ್ಘವಾಗಿ ದಾಖಲೆಗಳನ್ನು ಅಧ್ಯಯನ ಮಾಡಿದ್ದು ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೈಪಾಸ್ ರಸ್ತೆ ತೋಡು ಒತ್ತುವರಿ ತೆರವುಗೊಳಿಸಿದ್ದರಿಂದ ಕೆಲವು ಕಟ್ಟಡಗಳಿಗೆ ಅಪಾಯ ಎದುರಾಗಿದೆ ಎಂಬ ದೂರು ಕೇಳಿ ಬರುತ್ತಿದೆ. ಇಲ್ಲಿ ಬಫರ್ ಜೋನ್ ಜಾಗ ಗುರುತಿಸಿ ಅವರಿಗೆ ತಡೆಗೋಡೆ ಕಟ್ಟಿಕೊಳ್ಳಲು ಸಹಕರಿಸಲಾಗುವುದು ಎಂದು ಹೇಳಿದರು.
ಕಾವೇರಿ ಜಲಮೂಲ ಸಂರಕ್ಷಣಾ ಹೋರಾಟ ವೇದಿಕೆ ಅಧ್ಯಕ್ಷ ಪುಳಿಂಜನ ಪೂವಯ್ಯ ಮಾತನಾಡಿ, ಬೈಪಾಸ್ ರಸ್ತೆ ತೋಡು ಒತ್ತುವರಿ ತೆರವುಗೊಳಿಸಿದ ಮೇಲೆ ಕೀರೆಹೊಳೆ ಒತ್ತುವರಿ ತೆರವು ಸ್ಥಗಿತಗೊಂಡಿತು. ಇದು ಸಾರ್ವಜನಿಕರ ಹಲವು ಬಗೆಯ ಅನುಮಾನಗಳಿಗೆ ಆಸ್ಪದ ಮಾಡಿ ಕೊಟ್ಟಿದೆ. ಜೆಸಿಬಿ ಯಂತ್ರ ಒಂದು ತಿಂಗಳಿನಿAದ ಕೀರೆಹೊಳೆ ದಡದಲ್ಲಿ ತುಕ್ಕು ಹಿಡಿಯುತ್ತಾ ನಿಂತಿದೆ. ತಾಲೂಕು ಆಡಳಿತ ಕೆಲಸ ಆರಂಭಿ ಸುವ ಮೂಲಕ ಸಾರ್ವಜನಿಕರಲ್ಲಿ ಮನೆ ಮಾಡಿ ರುವ ಅನುಮಾನವನ್ನು ಪರಿಹರಿಸ ಬೇಕು ಎಂದು ಒತ್ತಾಯಿಸಿದರು.
ಗೌರವಾಧ್ಯಕ್ಷ ಗೋಪಿ ಚಿಣ್ಣಪ್ಪ ಮಾತನಾಡಿ, ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಮುಂದೆ ಯಾವುದೇ ಸಮಸ್ಯೆ ಆಗದಂತೆ ಸರ್ಕಾರಿ ಜಾಗವನ್ನು ಸಂರಕ್ಷಿಸುವುದು ತಾಲೂಕು ಆಡಳಿತ ಜವಾಬ್ದಾರಿಯಾಗಿದೆ ಎಂದರು.
ವೇದಿಕೆ ಮಾಧ್ಯಮ ಸಲಹೆಗಾರ ಟಿ.ಎಲ್. ಶ್ರೀನಿವಾಸ್ ಮಾತನಾಡಿ, ಗೋಣಿಕೊಪ್ಪಲು ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿದೆ. ಇದನ್ನು ತೆರವುಗೊಳಿಸದೇ ಇರುವುದರಿಂದ ಗ್ರಾ.ಪಂ.ಗೆ ಕಸ ಹಾಕುವುದಕ್ಕೂ ಜಾಗ ಇಲ್ಲದಂತಾಗಿದೆ. ಇದನ್ನೆಲ್ಲ ತಹಶೀಲ್ದಾರ್ ಅವರು ಪತ್ತೆಹೆಚ್ಚಿ ಸರ್ಕಾರಿ ಜಾಗವನ್ನು ಕಂದಾಯ ಇಲಾಖೆಯ ವಶಕ್ಕೆ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್, ವೇದಿಕೆಯ ಉಪಾಧ್ಯಕ್ಷೆ ಪಡಿಕಲ್ ಕುಸುಮಾವತಿ, ಯೋಜನಾ ನಿರ್ದೇಶಕ ತುಶಾರ್ ಕುಲಕರ್ಣಿ, ಖಜಾಂಚಿ ಸಲ್ಮಾ, ಕಂದಾಯ ನಿರೀಕ್ಷಕ ಸುಧೀಂದ್ರ ಹಾಜರಿದ್ದರು.