ಕಣಿವೆ, ಫೆ. ೨೦ : ಬೇಸಿಗೆಯ ದಿನಗಳು ಸನ್ನಿಹಿತವಾಗುತ್ತಿವೆ. ಅರಣ್ಯದಲ್ಲಿ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ನೋಡಿಕೊಳ್ಳಬೇಕಾದದ್ದು ಇಲಾಖೆಯ ಆದ್ಯ ಕರ್ತವ್ಯವಾಗಬೇಕಿದೆ. ಏಕೆಂದರೆ ಅರಣ್ಯ ಒಳಗೆ ಇರುವ ಕೆರೆಗಳನ್ನು ನಿರ್ವಹಣೆ ಮಾಡದೇ ನಿರ್ಲಕ್ಷ್ಯ ಮಾಡಿದ ಪರಿಣಾಮ ಬಹುತೇಕ ಕೆರೆಗಳಲ್ಲಿ ಹೂಳು ತುಂಬಿದ್ದು ಮಳೆಗಾಲದಲ್ಲಿ ಸ್ವಾಭಾವಿಕವಾಗಿ ಹರಿದು ಬರುವ ನೀರು ಕೆರೆಗಳಲ್ಲಿ ನಿಲ್ಲದಂತಹ ದುಸ್ಥಿತಿಯನ್ನು ಕಾಣಬಹುದು. ಆದ್ದರಿಂದಲೇ ವನ್ಯಮೃಗಗಳು ಕುಡಿಯುವ ನೀರಿಗೆ ಪರಿತಪಿಸಿ ಅರಣ್ಯವನ್ನು ದಾಟಿ ನಾಡಿನತ್ತ ಧಾವಿಸುತ್ತಿವೆ.
ಕುಶಾಲನಗರ ಅರಣ್ಯ ವಿಭಾಗದಲ್ಲಿ ವಿವಿಧೆಡೆಗಳಲ್ಲಿ ೨೨ ಕೆರೆಗಳಿದ್ದು ಎಲ್ಲವು ಹೂಳು ತುಂಬಿವೆ. ಈ ಪೈಕಿ ಕೆಲವೊಂದು ಕೆರೆಗಳಲ್ಲಿ ಹೂಳು ತೆಗೆವ ಹೆಸರಲ್ಲಿ ಲಕ್ಷಾಂತರ ರೂಪಾಯಿ ಪೋಲು ಮಾಡಿರುವ ಆರೋಪವೂ ಕೇಳಿ ಬರುತ್ತಿದೆ. ಕಾಡಾನೆಗಳಿಗೆ ಕಾಡಿನಲ್ಲಿ ಕುಡಿಯುವ ನೀರು ಮತ್ತು ಆಹಾರ ಇಲ್ಲದ್ದರಿಂದ ನಾಡಿನತ್ತ ಹೆಚ್ಚಾಗಿ ಧಾವಿಸಿ ಬರುವ ಹಿನ್ನೆಲೆಯಲ್ಲಿ ಕೃಷಿಕರಿಗೆ ಸಹಜವಾಗಿಯೇ ಬೆಳೆ ನಷ್ಟ ಆಗುತ್ತಿದ್ದು, ಬೆಳೆ ನಷ್ಟದಿಂದ ಬೇಸತ್ತ ಕೆಲವರು ಕಾಡಾನೆಗಳ ಜೀವಕ್ಕೆ ಕುತ್ತು ತರುತ್ತಿದ್ದಾರೆ.
೧೮ ಕಾಡಾನೆಗಳು ಸಾವು
ಕಳೆದ ಆರು ವರ್ಷಗಳ ಅವಧಿಯಲ್ಲಿ ಕುಶಾಲನಗರ ವಲಯ ಅರಣ್ಯ ವ್ಯಾಪ್ತಿ ಒಂದರಲ್ಲಿಯೇ ೧೮ ಕಾಡಾನೆಗಳು ಸಾವನ್ನಪ್ಪಿವೆ.
ಅಂದರೆ ಕಾಡಿನಲ್ಲಿ ಅವುಗಳ ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ಬೇಕಾದ ಆಹಾರದ ಗಿಡಮೂಲಿಕೆಗಳು, ಸೊಪ್ಪು - ಸೆದೆಗಳು ಇಲ್ಲದ ಕಾರಣ ಸಂಜೆಯಾಯಿತು ಎಂದರೆ ಆಹಾರಕ್ಕಾಗಿ ಹಾಹಾಕಾರ ಪಟ್ಟು ನಾಡಿನತ್ತ ಧಾವಿಸುವ ಕಾಡಾನೆಗಳು ಕಾಡಂಚಿನ ಖಾಸಗಿ ತೋಟಗಳಲ್ಲಿ ಸಾವನ್ನಪ್ಪಿವೆ.
೪-೫-೨೦೧೫ ರಂದು ಮಾಲ್ದಾರೆಯ ಜಿಗಣೆ ಹಡ್ಲು ಎಂಬಲ್ಲಿ ಗಂಡಾನೆ ಸಾವನ್ನಪ್ಪಿತ್ತು. ೨-೬-೨೦೧೫ ರಲ್ಲಿ ದುಬಾರೆ ಅರಣ್ಯ ವಾಪ್ತಿಯ ಸಿಪಿಟಿ - ೨೧ ರಲ್ಲಿ ಗಂಡಾನೆ ಸಾವನ್ನಪ್ಪಿತ್ತು. ೩೧- ೦೭- ೨೦೧೫ ರಲ್ಲಿ ಈರಳವಳಮುಡಿ ಗ್ರಾಮದಲ್ಲಿ ಹೆಣ್ಣಾನೆ, ೧೩-೦೬-೨೦೧೭ ರಲ್ಲಿ ಮೀನುಕೊಲ್ಲಿ ತೋಟಂಬೈಲು ಶ್ಯಾಂ ಪ್ರಸಾದ್ ತೋಟದಲ್ಲಿ ಹೆಣ್ಣಾನೆ, ೨೦-೦೭-೨೦೧೭ ರಲ್ಲಿ ನಂಜರಾಯಪಟ್ಟಣ ಕರ್ಣಯ್ಯನ ವಿಶ್ವನಾಥ್ ಅವರ ಅಡಿಕೆ ತೋಟದಲ್ಲಿ ಹೆಣ್ಣಾನೆ, ೧೪-೧೧-೨೦೧೭ ರಲ್ಲಿ ಹೆರೂರು ಸಿಪಿಟಿ - ೭ ರಲ್ಲಿ ಹೆಣ್ಣಾನೆ, ೧೭-೦೩-೨೦೧೮ ರಲ್ಲಿ ವಿರೂಪಾಕ್ಷಪುರದ ಖಾಸಗಿ ತೋಟದಲ್ಲಿ ಹೆಣ್ಣಾನೆ, ೨೨-೭-೨೦೧೮ ರಲ್ಲಿ ಅತ್ತೂರು ಮೀಸಲು ಅರಣ್ಯದಲ್ಲಿ ಗಂಡಾನೆ, ೧೬-೪-೨೦೧೮ ರಲ್ಲಿ ಕರಡಿಗೋಡಿನಲ್ಲಿ ಹೆಣ್ಣಾನೆ, ೦೬-೦೭-೨೦೧೯ ರಲ್ಲಿ ಅತ್ತೂರು ಮೀಸಲು ಅರಣ್ಯದಲ್ಲಿ ಗಂಡಾನೆ, ೨೧-೧೨-೨೦೧೯ ರಲ್ಲಿ ತ್ಯಾಗತ್ರೂರು ಗ್ರಾಮದ ಎನ್.ಟಿ. ಪೊನ್ನಪ್ಪ ಅವರ ತೋಟದಲ್ಲಿ ಹೆಣ್ಣಾನೆ, ೨-೪-೨೦೨೦ ರಲ್ಲಿ ಅಭ್ಯತಮಂಗಲದ ಪಿಂಟೋ ಎಂಬವರಿಗೆ ಸೇರಿದ ತೋಟದಲ್ಲಿ ಗಂಡಾನೆ, ೯-೬-೨೦೨೦ ರಲ್ಲಿ ದುಬಾರೆ ಅವರೆಗುಂದದಲ್ಲಿ ಹೆಣ್ಣಾನೆ, ಕಳೆದ ನಾಲ್ಕು ತಿಂಗಳ ಹಿಂದೆ ಬಸವನಹಳ್ಳಿ ಗ್ರಾಮದ ಶುಂಠಿ ಹೊಲದಲ್ಲಿ ದೈತ್ಯ ಗಂಡಾನೆ ಹಾಗೂ ಕಳೆದ ೧೦-೦೨- ೨೦೨೧ ರಲ್ಲಿ ದಾಸವಾಳದ ಖಾಸಗಿ ತೋಟದಲ್ಲಿ ೬ ರ ಪ್ರಾಯದ ಹೆಣ್ಣಾನೆ ಮರಿ ಸೇರಿ ಒಟ್ಟು ೧೮ ಕಾಡಾನೆಗಳು ಮೃತಪಟ್ಟಿವೆ.
(ಮೊದಲ ಪುಟದಿಂದ) ಆದರೆ ಇದುವರೆಗೂ ಆನೆಗಳನ್ನು ಕೊಂದ ವ್ಯಕ್ತಿಗಳ ಮೇಲೆ ದೂರು ದಾಖಲಾದ ಪ್ರಕರಣಗಳು ಕೇವಲ ಒಂದೆರಡು ಬಿಟ್ಟರೆ ಉಳಿದೆಲ್ಲವನ್ನು ಅರಣ್ಯ ಇಲಾಖೆ ಸಹಜ ಸಾವೆಂದು ಬರೆದು ಕೈತೊಳೆದುಕೊಂಡಿದೆ. ಹಾಗೆಯೇ ಕಳೆದ ಹಲವಾರು ವರ್ಷಗಳಿಂದಲೂ ವೈದ್ಯರೊಬ್ಬರೇ ಮೃತಪಟ್ಟ ಕಾಡಾನೆಗಳ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದು ವೈದ್ಯರು ನೀಡುವ ವರದಿ ಹಾಗೂ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಕಾಡಾನೆಗಳು ನಿರಂತರವಾಗಿ ಸಾಯುತ್ತಲೇ ಇವೆ. ಇದಕ್ಕೆ ಕಡಿವಾಣವೇ ಇಲ್ಲವೇ..? ವನ್ಯಮೃಗಗಳ ಸಂರಕ್ಷಣೆ ಮಾಡುವ ಮೂಲಕ ಅವುಗಳಿಗೆ ರಕ್ಷಣೆ ನೀಡಬೇಕಾದ ಇಲಾಖೆ ಏನು ಮಾಡುತ್ತಿದೆ ಎಂಬುದು ಪ್ರಾಣಿ ಪ್ರೇಮಿಗಳ ಪ್ರಶ್ನೆಯಾಗಿದೆ.
ಕಾಡಾನೆಗಳು ತೋಟಗಳಿಗೆ ನುಗ್ಗಿ ಬೆಳೆ ನಷ್ಟ, ಬೇಲಿ ಹಾನಿ ಮಾಡುತ್ತವೆ ಎಂದು ಮನನೊಂದ ಹಲವು ವ್ಯಕ್ತಿಗಳು ಸೋಲಾರ್ ಬೇಲಿಯಲ್ಲಿ ವಿದ್ಯುತ್ ಹರಿಸಿ ಕಾಡಾನೆಗಳನ್ನು ಸಾಯಿಸುವುದು. ಗುಂಡು ಹೊಡೆದು ಘಾಸಿಗೊಳಿಸಿ ಜೀವ ತೆಗೆಯುವುದು ಸೇರಿದಂತೆ ಇನ್ನಿತರೆ ದುಷ್ಕೃತ್ಯಗಳಿಂದ ಕಾಡಾನೆಗಳ ಸಾವಿಗೆ ಕಾರಣರಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಉದಾಹರಣೆಗೆ ಆನೆಕಾಡು ಬಳಿಯ ಬಸವನಹಳ್ಳಿಯಲ್ಲಿ ಆಹಾರ ಅರಸಿ ಗ್ರಾಮಕ್ಕೆ ಬಂದು ಕಾಡಿಗೆ ಮರಳುತ್ತಿದ್ದ ದೈತ್ಯ ಸಲಗವೊಂದಕ್ಕೆ ವಿದ್ಯುತ್ ಹರಿಸಿ ಸಾಯಿಸಲಾಗಿತ್ತು. ಹಾಗೆಯೇ ನಾಲ್ಕು ತಿಂಗಳ ಹಿಂದೆ ತೆಪ್ಪದ ಕಂಡಿ ಆಸುಪಾಸಿನ ಕಾವೇರಿ ನದಿ ದಂಡೆಯ ಮರೂರಿನಲ್ಲಿಯೂ ಕೂಡ ಅಲ್ಲಿನ ಬೆಳೆಗಾರರೊಬ್ಬರು ಸೋಲಾರ್ ತಂತಿಗೆ ವಿದ್ಯುತ್ ಹರಿಬಿಟ್ಟು ಕಾಡಾನೆಯೊಂದರ ಸಾವಿಗೆ ಕಾರಣವಾಗಿದ್ದರು.
ಇದೀಗ ನಂಜರಾಯಪಟ್ಟಣದ ದಾಸವಾಳದಲ್ಲಿ ಮೃತ ಪಟ್ಟ ಆರು ವರ್ಷ ಪ್ರಾಯದ ಮರಿಯಾನೆ ಸಾವಿಗೂ ಇಂತಹುದೇ ಕಾರಣವಿರಬಹುದಾದ ಶಂಕೆ ಇದೆ. ಹಾಗಾಗಿ ಕಾಡಾನೆಗಳ ಜೀವಹಾನಿ ತಪ್ಪಿಸಲು ಅರಣ್ಯಗಳಲ್ಲಿ ಇರುವ ಕೆರೆಗಳ ಸಂರಕ್ಷಣೆ ಹಾಗೂ ನೀರು ಶೇಖರಣೆ ಕಾರ್ಯ ಅತೀ ತುರ್ತು ಅನಿವಾರ್ಯವಾಗಿದೆ.
೨೨ ಕೆರೆಗಳಿವೆ
ಕುಶಾಲನಗರ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ಸೇರಿದಂತೆ ವನ್ಯಮೃಗಗಳ ದಾಹ ತೀರಿಸಲು ವಿವಿಧೆಡೆಗಳಲ್ಲಿ ೨೨ ಕೆರೆಗಳಿವೆ.
ಆನೆಕಾಡು ಅರಣ್ಯದ ವ್ಯಾಪ್ತಿಯಲ್ಲಿ ೬ ಕೆರೆಗಳಿವೆ. ಅಂದರೆ ಆನೆಕಾಡು ಕೆರೆಮೂಲೆ ದೆವ್ವದ ಕೆರೆ, ಚುಂಡೇಕೆರೆ, ಆನೆಕಾಡು ವಸತಿ ಗೃಹ ಮುಂಬದಿಯ ಸಣ್ಣ ಕೆರೆ, ದಾಸವಾಳದ ಕೆರೆ, ಬಿದಿರಳ್ಳ ಕೆರೆ, ತೊಂಡೂರು ಕೆರೆ, ಏಳನೇ ಹೊಸಕೋಟೆ ಭಾಗದಲ್ಲಿ ಮಾವಿನಳ್ಳ ಕೆರೆ, ತಟ್ಟೆಕೆರೆ, ದುಬಾರೆ ವ್ಯಾಪ್ತಿಯ ಅಮ್ಮಾಳೆ ಕೆರೆ, ಆನೆಸತ್ತ ಕೆರೆ, ಕಂಡೆಕೆರೆ, ಕೋಣನಕಟ್ಟೆ ಕೆರೆ, ಬಾಚಿ ಕೆರೆ, ಕುಂಡೇ ಕೆರೆ, ಅತ್ತೂರು ಕೆರೆ, ಕಲ್ಲೂರು ಕೆರೆ, ಚೈನ್ ಗೇಟ್ ಕೆರೆ, ಅರಳಿಮರದ ಪಕ್ಕದ ಕೆರೆ, ಮಾಲ್ದಾರೆ ವಿಭಾಗದ ಕುಟ್ಡನಹಳ್ಳ ಕೆರೆ, ಪಟ್ಲಮಂಟಿಕೆರೆ, ನಂಜರಾಯಪಟ್ಟಣ ಚಿನ್ನೂರು ಕೆರೆ ಹೀಗೆ ಒಟ್ಟು ೨೨ ಕೆರೆಗಳಿವೆ.
ಆಹಾರಕ್ಕಾಗಿ ಹಾಹಾಕಾರ
ಪ್ರೌಢ ವಯಸ್ಸಿನ ಆನೆಗಳು ಪ್ರತಿದಿನ ೧೦೦ ರಿಂದ ೧೫೦ ಕೆ.ಜಿ. ಮೇವು ತಿಂದು ೧೫೦ ಲೀಟರ್ ನಷ್ಟು ನೀರು ಕುಡಿಯುತ್ತವೆ. ವರುಣನ ಕೃಪೆಯಿಂದಾಗಿ ಹೂಳು ತುಂಬಿರುವ ಅರ್ಧಂಬರ್ಧ ಕೆರೆಗಳಲ್ಲಿ ನೀರೇನೋ ಇದೆ. ಆದರೆ ಕಾಡಾನೆಗಳು ಹೊಟ್ಟೆ ತುಂಬಿಸಿಕೊಳ್ಳಲು ಬೇಕಾದ ಆಹಾರದ ಸೊಪ್ಪು ಹಾಗೂ ತೊಗಟೆ ಇರುವ ಮರಗಳೇ ಇಲ್ಲ.
ಅಂದರೆ ಆನೆಗಳಿಗೆ ಬಿದಿರು ಸೊಪ್ಪು, ಆಲದ ಮರ, ಬಸರಿ ಮರ, ಕಿಚಿಯಾ ಮರಗಳ ಎಲೆಗಳು ಬಲು ಇಷ್ಟ ಆದರೆ ಈ ಜಾತಿಯ ಮರಗಳು ಇಂದು ಅರಣ್ಯಗಳಲ್ಲಿ ಇಲ್ಲವೇ ಇಲ್ಲ. ಹಾಗಾಗಿ ಅರಣ್ಯ ಇಲಾಖೆ ಕಾಟಾಚಾರದ ಗಿಡಗಳನ್ನು ಬೆಳೆಸುವ ನಾಟಕ ಕೈಬಿಟ್ಟು ಪ್ರತೀ ವರ್ಷ ಕಾಡಾನೆಗಳಿಗೆ ಬೇಕಾದ ಆಹಾರದ ಗಿಡ ಮರಗಳನ್ನು ನಿಗದಿತ ಅರಣ್ಯ ಪ್ರದೇಶಗಳಲ್ಲಿ ಬೆಳೆಸುವ ಯೋಜನೆಗೆ ಮುಂದಾಗಬೇಕಿದೆ.
(ವರದಿ : ಕೆ.ಎಸ್. ಮೂರ್ತಿ)