ಸೋಮವಾರಪೇಟೆ, ಫೆ. ೨೦ : ಕಳೆದ ೨೦೦೬ರಿಂದಲೂ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಒದಗಿಸುವಂತೆ ರೈತ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದರೂ, ಸರ್ಕಾರಗಳು ಮಾತ್ರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿದಂತೆ ಕಂಡುಬAದಿಲ್ಲ. ಉಚಿತ ವಿದ್ಯುತ್ ಬೇಡಿಕೆಯ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರಿಗೆ ಇಂಧನ ಸಚಿವರು ನೀಡಿರುವ ಉತ್ತರದಿಂದಾಗಿ ಮತ್ತೊಮ್ಮೆ ಕಾಫಿ ಬೆಳೆಗಾರರಲ್ಲಿ ನಿರಾಶೆ ಮೂಡಿದಂತಾಗಿದೆ.

ಕಳೆದ ಬಾರಿ ಬೆಳಗಾವಿಯಲ್ಲಿ ನಡೆದ ಅಧಿವೇಶನ ಸಂದರ್ಭವೂ ರೈತ ಸಂಘಟನೆಗಳು ನಿರಂತರ ಧರಣಿ ಸತ್ಯಾಗ್ರಹ ನಡೆಸಿದ್ದು, ಅಧಿವೇಶನದಲ್ಲಿಯೇ ಈ ಬಗ್ಗೆ ಘೋಷಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದವು. ಸೋಮವಾರಪೇಟೆಯಲ್ಲಿ ಸತತ ೧೭ ದಿನಗಳ ಕಾಲ ಧರಣಿ ನಡೆದಿತ್ತು.

ಆ ಸಂದರ್ಭ ಜಿಲ್ಲೆಯ ಶಾಸಕರುಗಳಾದ ಅಪ್ಪಚ್ಚುರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರು, ಕೊಡಗಿನ ಕಾಫಿ ಬೆಳೆಗಾರರ ೧೦ ಹೆಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಕ್ರಮ ವಹಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಹಣಕಾಸು ಇಲಾಖೆಗೆ ಹಸ್ತಾಂತರಿಸಿ ಪರಿಶೀಲನೆಯ ನಂತರ ಮುಂದಿನ ಕ್ರಮಕೈಗೊಳ್ಳುವಂತೆ ಇಂಧನ ಇಲಾಖೆಗೆ ಸೂಚಿಸಿದ್ದರು.

ಇದರಿಂದಾಗಿ ಕಾಫಿ ಬೆಳೆಗಾರರ ಹೋರಾಟಕ್ಕೆ ಮನ್ನಣೆ ಸಿಗುತ್ತದೆ ಎಂದೇ ನಂಬಲಾಗಿತ್ತು. ಆದರೆ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಶಾಸಕ ರಂಜನ್ ಅವರಿಗೆ ಇಂಧನ ಸಚಿವ ಸುನಿಲ್‌ಕುಮಾರ್ ಅವರು ನೀಡಿರುವ ಉತ್ತರ ಮತ್ತೊಮ್ಮೆ ನಿರಾಶೆ ತಂದಿದೆ.

ಕೊಡಗಿನಲ್ಲಿ ಇತ್ತೀಚೆಗೆ ಉಂಟಾದ ಜಲಪ್ರಳಯದಲ್ಲಿ ರೈತರು ಭೂಮಿ ಹಾಗೂ ಬೆಳೆ ನಷ್ಟ ಅನುಭವಿಸಿದ್ದಾರೆ. ಈ ಪೈಕಿ ಕಾಫಿ ಬೆಳೆಯುವ ರೈತರು ವರ್ಷದಲ್ಲಿ ಒಂದು ತಿಂಗಳು ಮಾತ್ರ ಗಿಡಗಳಿಗೆ ನೀರು ಹಾಯಿಸುತ್ತಿದ್ದು, ಇಂತಹ ರೈತರಿಗೆ ಉಚಿತ ವಿದ್ಯುತ್ ಸಂಪರ್ಕ

(ಮೊದಲ ಪುಟದಿಂದ) ನೀಡಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು? ಎಂದು ಶಾಸಕ ಅಪ್ಪಚ್ಚುರಂಜನ್ ಅವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿರುವ ಇಂಧನ ಸಚಿವ ಸುನಿಲ್‌ಕುಮಾರ್ ಅವರು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಕಾಫಿ ಬೆಳೆಗಾರರ ಹಿತದೃಷ್ಟಿಯಿಂದ ಆರ್ಥಿಕ ಹೊರೆಯಾಗದಂತೆ ಕಡಿಮೆ ದರದಲ್ಲಿ ವಿದ್ಯುತ್ ನೀಡುತ್ತಿದೆ. ೧೦ ಹೆಚ್.ಪಿ. ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯ ಹೊಂದಿರುವ ಕಾಫಿ ಬೆಳೆಗಾರರ ಪ್ರತಿ ಹೆಚ್.ಪಿ.ಗೆ ರೂ.೮೦ ಹಾಗೂ ಪ್ರತಿ ಯೂನಿಟ್‌ಗೆ ೩.೮೫ ಶುಲ್ಕ ವಿಧಿಸಿದೆ. ಈ ಪ್ರವರ್ಗದ ವಿದ್ಯುತ್ ಗ್ರಾಹಕರುಗಳ ವಿದ್ಯುತ್ ಶುಲ್ಕ ಪಾವತಿಗೆ ವಿನಾಯಿತಿ ನೀಡುವ ವಿಷಯವು ಸರ್ಕಾರದ ಪರಿಶೀಲನೆಯ ಹಂತದಲ್ಲಿದ್ದು, ಅಂತಿಮ ನಿರ್ಣಯ ಕೈಗೊಳ್ಳಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.

ಸಚಿವರ ಉತ್ತರದಲ್ಲಿ ರೈತರ ಪ್ರಮುಖ ಬೇಡಿಕೆಯಾಗಿರುವ ‘ಉಚಿತ ವಿದ್ಯುತ್’ ಹೆಸರು ಪ್ರಸ್ತಾಪವಾಗದೇ ಇರುವುದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರಲ್ಲಿ ಮತ್ತೊಮ್ಮೆ ನಿರಾಶೆ ಮೂಡಿದೆ. ಬೆಳಗಾವಿ ಅಧಿವೇಶನದಲ್ಲಿ ಸಲ್ಲಿಸಿದ್ದ ಮನವಿಗೆ ಸರ್ಕಾರ ಸ್ಪಂದನೆ ನೀಡಿಲ್ಲ. ಈಗಿನ ಬೆಂಗಳೂರು ಅಧಿವೇಶನದಲ್ಲಿ ಈ ಬಗ್ಗೆ ಗಟ್ಟಿ ದನಿಯಲ್ಲಿ ಸರ್ಕಾರದ ಗಮನ ಸೆಳೆದು ಕೊಡಗಿನ ರೈತರ ಬೇಡಿಕೆ ಈಡೇರಿಸಲೇಬೇಕು ಎಂದು ರೈತ ಸಂಘದ ಪ್ರಮುಖರು ಆಗ್ರಹಿಸಿದ್ದಾರೆ.