ನಾಪೋಕ್ಲು, ಫೆ. ೨೦: ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಜಿಲ್ಲೆಯ ಯುವಕ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಭಾನುವಾರ ಮಾಣಿ-ಮೈಸೂರು ಹೆದ್ದಾರಿಯಲ್ಲಿನ ಕಾವು ಸಮೀಪದ ಮಡ್ಯಂಗಳ ಎಂಬಲ್ಲಿ ನಡೆದಿದೆ.
ಪುತ್ತೂರಿನಿಂದ ಸುಳ್ಯದ ಕಡೆ ಹೋಗುತ್ತಿದ್ದ ಕಾರು ಮತ್ತು ಮಡಿಕೇರಿಯಿಂದ ಪುತ್ತೂರು ಮಾರ್ಗವಾಗಿ ಬಜ್ಪೆಗೆ ಸಾಗುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಎರಡೂ ಕಾರುಗಳು ನಜ್ಜುಗುಜ್ಜಾಗಿವೆ.
ಮೃತಪಟ್ಟ ವ್ಯಕ್ತಿ ಭಾಗಮಂಡಲದ ಸಮೀಪದ ಚೆಟ್ಟಿಮಾನಿ ನಿವಾಸಿ ಪೊನ್ನೆಟ್ಟಿ ಜಯಕುಮಾರ ಮತ್ತು ನವೀನಾ ದಂಪತಿ ಪುತ್ರ ರಾಜೀವ್ (೩೧) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಪತ್ನಿ, ಪುತ್ರಿಯೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದರು. ಅಲ್ಲಿಯೇ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದರು
ಎಂದು ತಿಳಿದು ಬಂದಿದೆ. ಇತ್ತೀಚಿಗಷ್ಟೆ ಚೆಟ್ಟಿಮಾನಿಯಲ್ಲಿ ರಾಜೀವ್
ಕುಟುಂಬ ಮನೆ ನಿರ್ಮಿಸಿತ್ತು.
(ಮೊದಲ ಪುಟದಿಂದ) ಇದನ್ನು ನೋಡಲೆಂದು ರಾಜೀವ್ ಮತ್ತು ಅವರ ಸ್ನೇಹಿತರ ಕುಟುಂಬದೊAದಿಗೆ ಚೆಟ್ಟಿಮಾನಿಗೆ ಬಂದು ವಾಪಸ್ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಮಂಗಳೂರು ತಾಲೂಕಿನ ಬಜ್ಪೆ ನಿವಾಸಿಗಳಾದ ರಾಜು ಪೂಜಾರಿ (೪೨) ಅವರ ಪತ್ನಿ ನೇತ್ರಾವತಿ (೪೦), ಪುತ್ರಿ ಜ್ಯೋತಿ ಹಾಗೂ ಪುತ್ರ ಚೇತನ್ ಗಾಯಗೊಂಡಿದ್ದಾರೆ.
ಈ ಪೈಕಿ ಜ್ಯೋತಿ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- ದುಗ್ಗಳ ಸದಾನಂದ