ಕಣಿವೆ, ಫೆ. 17: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಕೂಡ ಅರಣ್ಯಗಳಲ್ಲಿ ವಾಸವಿರುವ ಗಿರಿಜನ ಕುಟುಂಬಗಳು ಸರ್ಕಾರದ ಮೂಲ ಸವಲತ್ತುಗಳಿಂದಿರಲೀ, ವೈಯಕ್ತಿಕ ಬೆಳವಣಿಗೆಗೆ ಅಗತ್ಯವಾದ ಪೂರಕ ಶಿಕ್ಷಣದಿಂದ ದೂರವೇ ಉಳಿದಿವೆ.

ಅಂದರೆ, ಮೂಲ ಕಸುಬಾಗಿ ಕಾಫಿ ತೋಟಗಳಲ್ಲಿನ ಕೂಲಿಯನ್ನೇ ನಂಬಿ ಬದುಕುತ್ತಿರುವ ಬಹುಪಾಲು ಗಿರಿಜನ ಪೆÇೀಷಕರು ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ಕೊಡಿಸುವಲ್ಲಿ ಮುಂದಾಗುತ್ತಿಲ್ಲ. ಜೊತೆಗೆ ಆರೋಗ್ಯ ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆ.

ಏಕೆಂದರೆ ಮಕ್ಕಳ ಪೆÇೀಷಕರೇ ನಿರಕ್ಷರಕುಕ್ಷಿಗಳಾಗಿರುವುದರಿಂದ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬ ಕನಿಷ್ಟ ಆಸಕ್ತಿ ಇಲ್ಲ ಎಂಬುದು ವಿಪರ್ಯಾಸ. ಇದರಿಂದಾಗಿ ಹದಿಹರೆಯದ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ವಯೋ ಸಹಜವಾದ ದೇಹದ ಆಕರ್ಷಣೆಗೆ ತುತ್ತಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದು ಪೆÇಲೀಸ್ ಇಲಾಖೆಯ ಪೆÇೀಕ್ಸೋ ಕಾಯಿದೆಗೆ ಕಾರಣವಾಗುತ್ತಿದೆ. ಈಗಾಗಲೇ ಕುಶಾಲನಗರ ತಾಲೂಕಿನ ವಿವಿಧ ಗಿರಿಜನ ಹಾಡಿಗಳಲ್ಲಿ, ಆದಿವಾಸಿಗಳ ಕಾಲೋನಿಗಳಲ್ಲಿ ಇಂತಹ ಪ್ರಕರಣಗಳು ಎಗ್ಗಿಲ್ಲದೇ ಘಟಿಸುತ್ತಲೇ ಇವೆ.

ಗಿರಿಜನರ ಕಲ್ಯಾಣ ಇಲಾಖೆ ಏನು ಮಾಡುತ್ತಿದೆ ?

ಗಿರಿಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊಡ ಮಾಡುವ ಹತ್ತು ಹಲವು ಸೌಕರ್ಯಗಳನ್ನು ನೇರವಾಗಿ ಅವರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಗಿರಿಜನರ ಅಭ್ಯುದಯಕ್ಕಾಗಿ ಮಿಡಿಯಬೇಕಾದ ಇಲಾಖೆ ಏನು ಮಾಡುತ್ತಿದೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡುತ್ತಿವೆ.

ಆರೋಗ್ಯ ಶಿಕ್ಷಣದಿಂದಲೂ ವಂಚಿತ

ಮೊದಲೇ ಮೂಲ ಶಿಕ್ಷಣದಿಂದ ವಂಚಿತರಾಗುತ್ತಿರುವ ಗಿರಿಜನ ಹಾಡಿಗಳ ಮಕ್ಕಳಿಗೆ ಅತೀ ಅಗತ್ಯವಾಗಿ ಬೇಕಾದ ಆರೋಗ್ಯ ಶಿಕ್ಷಣ ಮರೀಚಿಕೆಯಾಗಿದೆ. ಅಂದರೆ ಹಾಡಿಗಳಿಗೆ ತೆರಳಿ ಹಾಡಿಗಳಲ್ಲಿನ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಮಾಸಿಕ ಋತುಸ್ರಾವದ ನಿರ್ವಹಣೆ, ವೈಯಕ್ತಿಕ ಸ್ವಚ್ಛತೆ, ಆರೋಗ್ಯದ ಅರಿವು ಸೇರಿದಂತೆ ಇನ್ನಿತರೇ ಪೂರಕವಾದ ಅರಿವು ಮೂಡಿಸಬೇಕಾದ ಇಲಾಖೆಗಳು ಏನು ಮಾಡುತ್ತಿವೆ ಎಂಬುದು ಇಲ್ಲಿ ಪ್ರಶ್ನಾರ್ಥಕವಾಗಿದೆ.

ಶಿಕ್ಷಣಕ್ಕೆ ಅಡ್ಡಿಯಾಗುತ್ತಿರುವ ಮದ್ಯಪಾನ

ಜಿಲ್ಲೆಯಲ್ಲಿರುವ ಯಾವುದೇ ಹಾಡಿಗಳಿಗೆ ತೆರಳಿ ಪರಿಶೀಲಿಸಿದರೂ ಕೂಡ ಅಲ್ಲಿ ಶಿಕ್ಷಣದಿಂದ ವಂಚಿತ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳೇ ಹೆಚ್ಚಾಗಿ ಕಾಣಸಿಗುತ್ತಾರೆ.(ಮೊದಲ ಪುಟದಿಂದ) ಏಕೆಂದರೆ, ಓದಬೇಕೆಂಬ ಹಂಬಲವುಳ್ಳ ಕೆಲವೇ ಕೆಲವು ಮಕ್ಕಳಿಗೆ ಆ ಕುಟುಂಬದ ಪೆÇೀಷಕರು ಅವಿದ್ಯಾವಂತರಾಗಿರುವ ಕಾರಣ ಆ ಮನೆಗಳಲ್ಲಿ ಮಕ್ಕಳಿಗೆ ಪೂರಕವಾದ ವಾತಾವರಣ ಇರುವುದಿಲ್ಲ. ಅಂದರೆ ದಿನವಿಡೀ ಕೂಲಿ ಮಾಡಿ ಸಂಜೆ ಮನೆಗೆ ಬರುವ ಬಹುಪಾಲು ಗಿರಿಜನ ಪೆÇೀಷಕರು, ದಿನವಿಡೀ ದುಡಿದು ಆಯಾಸಗೊಂಡ ದೇಹಕ್ಕೆ ತಾವು ರೂಢಿಸಿಕೊಂಡಿರುವ ಟಾನಿಕ್ ನೀಡುವ ‘ಮದ್ಯ’ವನ್ನು ಅತಿಯಾಗಿ ಸೇವಿಸುವುದರಿಂದ ಮನೆಯೊಳಗಿನ ಮಕ್ಕಳ ಭವಿಷ್ಯದ ಬಗ್ಗೆ ಅರಿವೇ ಇರುವುದಿಲ್ಲ. ಹಾಗಾಗಿ ಮಕ್ಕಳು ಕೂಡ ಚಿಕ್ಕ ವಯಸ್ಸಿನಲ್ಲಿಯೇ ಚಟಕ್ಕೆ ತುತ್ತಾಗುತ್ತಿದ್ದಾರೆ. ಅಂದರೆ ಹಣದ ಅಗತ್ಯದಿಂದ ಶಾಲೆಗೆ ಗುಡ್ ಬೈ ಹೇಳಿ ಪೆÇೀಷಕರ ಸಂಗಡ ಕೂಲಿಗೆ ತೋಟಕ್ಕೆ ತೆರಳುತ್ತಾರೆ.

ಹಾಡಿಯೊಂದಕ್ಕೆ ತೆರಳಿದ ‘ಶಕ್ತಿ' ಯೊಂದಿಗೆ ಪ್ರತಿಕ್ರಿಯಿಸಿದ ಶಾಲೆ ಹಾಗೂ ಕಾಲೇಜು ತೊರೆದ ಕೆಲವು ಗಿರಿಜನ ಹೆಣ್ಣು ಮಕ್ಕಳು ‘ನನಗೆ ಹತ್ತನೇ ತರಗತಿ ಬಳಿಕ ಕಾಲೇಜಿಗೆ ಹೋಗಿ ಬರಲು ವಾಹನಗಳ ಸೌಲಭ್ಯವಿಲ್ಲ. ಹಾಗಾಗಿ ಓದುವುದನ್ನು ನಿಲ್ಲಿಸಿ ಕೂಲಿಗೆ ಹೋಗ್ತೇನೆ ಎಂದು ಒಬ್ಬಾಕೆ ಹೇಳಿದರೆ, ಓದೋಣ ಎಂದರೆ ಮನೆಯೊಳಗೆ ಕರೆಂಟು ಇಲ್ಲ. ದೀಪ ಹಚ್ಚಿ ಓದಲು ಸೀಮೆ ಎಣ್ಣೆನೂ ಕೊಡಲ್ಲ. ಜೊತೆಗೆ ಅಪ್ಪ ಅಮ್ಮನ ಜಗಳದ ಗಂಟು ನನ್ನ ಓದಿಗೆ ಕಗ್ಗಂಟಾಗುತ್ತಿದೆ. ಏನು ಮಾಡೋದು’ ಎಂಬುದು ಇನ್ನೊಬ್ಬಾಕೆಯದು.

ಗಿರಿಜನರ ಮಕ್ಕಳ ವಿದ್ಯಾಭ್ಯಾಸಕ್ಕೆಂದೇ ಸರ್ಕಾರ ಕಟ್ಟಿಸಿರುವ ಹಾಸ್ಟೆಲ್‍ಗಳಿವೆಯಲ್ಲ ? ಅಲ್ಲಿಯೇ ಉಳಿದು ಓದಬಹುದಲ್ಲಾ ಎಂಬ ಪ್ರಶ್ನೆಗೆ ಅಪ್ಪ ಅಮ್ಮ ದೂರ ಕಳಿಸಲ್ಲ ಎಂಬ ಉತ್ತರ ಮತ್ತೊಬ್ಬಳಿಂದ ಕೇಳಿ ಬಂತು.

ಹಾಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿಗಳ ಪಿಡಿಒ ಗಳು ಆಯಾಯ ವ್ಯಾಪ್ತಿಯ ಗಿರಿಜನ ಹಾಡಿಯ ಶಾಲೆ ಕಾಲೇಜು ವಂಚಿತ ಅಥವಾ ಶಾಲೆ ಕಾಲೇಜು ಬಿಟ್ಟ ಮಕ್ಕಳನ್ನು ಪಟ್ಟಿ ಮಾಡಿ ಪೆÇೀಷಕರ ಮನವೊಲಿಸಿ ಹಾಸ್ಟೆಲ್ ಗಳಿಗೆ ಸೇರಿಸಿ ಓದಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕಿದೆ.

ಹಾಡಿಗಳಲ್ಲಿ ಜನ ಜಾಗೃತಿ ಆಗಬೇಕು

ಕೊಡಗು ಜಿಲ್ಲೆಯಾದ್ಯಂತ ವಿವಿಧೆಡೆಗಳಲ್ಲಿ ಇರುವ ಗಿರಿಜನ ಹಾಡಿಗಳಲ್ಲಿ ಬಾಲ್ಯ ವಿವಾಹದ ಕಾಯಿದೆ, ಪೆÇೀಕ್ಸೋ ಕಾಯಿದೆಗಳ ಬಗೆಗಳಾಗಲೀ ಅಲ್ಲಿನ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಇಲ್ಲಿನ ಮಂದಿಗೆ ಸಕಾಲಿಕವಾಗಿ ಮಾಹಿತಿ ನೀಡಿ ಜನ ಜಾಗೃತಿ ಮೂಡಿಸಬೇಕಾದ ಗಿರಿಜನ ಅಭಿವೃದ್ಧಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಎಲ್ಲೋ ಒಂದೆಡೆ ಎಡವುತ್ತಿವೆಯೇ ಎಂಬ ಪ್ರಶ್ನೆ ಮೂಡುತ್ತಿದೆ.

ಅಪ್ರಾಪ್ತ ವಯಸ್ಸಿಗೆ ವಿವಾಹವಾಗುವ ಮಕ್ಕಳ ಪೆÇೀಷಕರಿಗೆ ಬಾಲ್ಯ ವಿವಾಹ ಕಾಯಿದೆ ಹಾಗೂ ಅತ್ತ ಆ ಬಾಲಕನಿಗೆ ಪೆÇೀಕ್ಸೋ ಕಾಯಿದೆಗಳು ಉರುಳಾಗುವುದರ ಬಗ್ಗೆ ಮಾಹಿತಿಗಳೇ ಇರುವುದಿಲ್ಲ. ಹಾಗಾಗಿ ಅಪ್ರಾಪ್ತ ವಯಸ್ಸಿಗೆ ಹಾಡಿಗಳ ಹುಡುಗ ಹುಡುಗಿ ವಿವಾಹವಾಗಿ ಗರ್ಭಿಣಿಯಾದ ವಿಚಾರ ಅರಿತೊಡನೆ ಆರೋಗ್ಯ ಅಧಿಕಾರಿಗಳು ಓಡೋಡಿ ಬಂದು ಪೆÇಲೀಸರಿಗೆ ದೂರು ನೀಡಿದಾಗ, ಪೆÇಲೀಸರು ಅಲ್ಲಗಳೆಯದೇ ಅಥವಾ ಆ ಅಮಾಯಕ ಗಿರಿಜನ ಕುಟುಂಬಗಳ ಮೇಲೆ ಮಾನವೀಯತೆ ತೋರಿಕೊಂಡು ಸುಮ್ಮನೆ ಕೂರುವುದಕ್ಕೂ ಆಗುವುದಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಒಮ್ಮೆ ದೂರು ನೀಡಿದ ಬಳಿಕ ಆ ದೂರಿನ ಮೇಲೆ ಪೆÇಲೀಸರು ಎಫ್‍ಐಆರ್ ಮಾಡಲೇಬೇಕಾದ ಸ್ಥಿತಿ. ಹಾಗಾಗಿ ಕಾಯಿದೆಗಳ ಅರಿವಿಲ್ಲದೆಯೇ ಅಮಾಯಕ ಮಕ್ಕಳು ಮಾಡುವ ತಪ್ಪಿಗೆ ಅವರ ಪೆÇೀಷಕರು ಹಾಗೂ ಈ ಮಕ್ಕಳು ಶಿಕ್ಷೆ ಅನುಭವಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಗಿರಿಜನ ಮಕ್ಕಳಿಗೆ ಹಾಗೂ ಪೆÇೀಷಕರಿಗೆ ಅತೀ ತುರ್ತಾಗಿ ಕಾನೂನುಗಳ ಅರಿವು ಮೂಡಿಸಲೇಬೇಕಿದೆ.

ಕುಶಾಲನಗರ ತಾಲೂಕಿನ ಬ್ಯಾಡಗಟ್ಟ ಗಿರಿಜನ ಕಾಲೋನಿ, ಬಸವನಹಳ್ಳಿ ಗಿರಿಜನ ಹಾಡಿ, ನಂಜರಾಯಪಟ್ಟಣ ಹಾಡಿ, ಹಾಗೆಯೇ ಸೋಮವಾರಪೇಟೆ ತಾಲೋಕಿನ ವಳಗುಂದ ಗಿರಿಜನ ಹಾಡಿಯಲ್ಲಿ ಇಂತಹ ಅಪ್ರಾಪ್ತ ವಯಸ್ಕರ ಮದುವೆ ನಡೆದು ಅವರ ವಿರುದ್ಧ ಪೆÇೀಕ್ಸೋ ಕಾಯಿದೆ ದಾಖಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಬಾಲ್ಯ ವಿವಾಹ ಹಾಗೂ ಪೆÇೀಕ್ಸೋ ಕಾಯಿದೆಗಳ ಕನಿಷ್ಟ ಅರಿವು ಇಲ್ಲದೇ ಅಲ್ಲಿನ ಮಕ್ಕಳು ವಿವಾಹವಾದಾಗ ಆರೋಗ್ಯ ಇಲಾಖೆ ಈ ಬಗ್ಗೆ ದೂರು ನೀಡಿದಾಗ ನಾವು ವಿಧಿ ಇಲ್ಲದೇ ದೂರು ದಾಖಲಿಸಿ ಆರೋಪಿಗಳನ್ನು ಜೈಲಿಗೆ ಕಳುಹಿಸಲೇಬೇಕಾದ ಅನಿವಾರ್ಯತೆ ಇರುತ್ತದೆ. ಹಾಗಾಗಿ ಕಾಯಿದೆಗಳ ಮಾಹಿತಿ ಇಲ್ಲದೆಯೇ ಈ ಶ್ರಮಿಕರ ಕುಟುಂಬಗಳಲ್ಲಿ ನಡೆಯುವ ಪ್ರಮಾದಗಳಿಗೆ ಕುಟುಂಬ ಸದಸ್ಯರು ಅಥವಾ ಅವಲಂಬಿತರು ಸಂಕಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಸಂಬಂಧ ಪಟ್ಟ ಇಲಾಖೆಗಳು ಅಗತ್ಯ ಜನಜಾಗೃತಿ ಮೂಡಿಸುವ ಮೂಲಕ ಗಿರಿಜನರ ಕುಟುಂಬಗಳಲ್ಲಿ ಹೊಸ ಬೆಳಕು ಮೂಡಿಸುವಂತಾಗಬೇಕು ಎಂದು ಕುಶಾಲನಗರದ ಡಿವೈಎಸ್ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್, ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಶಿವಶಂಕರ್ ಹೇಳುತ್ತಾರೆ.

( ವರದಿ : ಕೆ.ಎಸ್.ಮೂರ್ತಿ, ಕುಶಾಲನಗರ )