ಪೆÇನ್ನಂಪೇಟೆ, ಫೆ. 17: ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ರಾಜ್ಯ ಸರಕಾರ ಈ ಹಿಂದೆ ಕಡ್ಡಾಯಗೊಳಿಸಿದ್ದ ಆರ್.ಟಿ.ಪಿ.ಸಿ.ಆರ್. ವರದಿಯ ನಿಬರ್ಂಧನೆಯನ್ನು ರದ್ದುಗೊಳಿಸಲಾಗಿದೆ. ಇನ್ನು ಮುಂದೆ ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಆರ್.ಟಿ.ಪಿ.ಸಿ.ಆರ್. ವರದಿ ಕಡ್ಡಾಯವಲ್ಲ

ಈ ಕುರಿತು ಗುರುವಾರದಂದು ಆದೇಶ ಹೊರಡಿಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಅವರು, ಕೇರಳ ಮತ್ತು ಗೋವಾ ರಾಜ್ಯಗಳಿಂದ ವಿಮಾನ, ರೈಲು ಮತ್ತು ವಾಹನಗಳಲ್ಲಿ ಆಗಮಿಸುವ ಪ್ರಯಾಣಿಕರಿಗೆ ಇನ್ನು ಮುಂದೆ ಆರ್.ಟಿ.ಪಿ.ಸಿ.ಆರ್. ವರದಿ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಕೇರಳ ಮತ್ತು ಗೋವಾ ರಾಜ್ಯಗಳಿಂದ ಬರುವವರಿಗೆ ಎರಡು ಡೋಸ್ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಗಡಿಯಲ್ಲಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಸಂಬಂಧಿಸಿದವರಿಗೆ ಹಾಜರುಪಡಿಸಬೇಕು ಎಂದು ಸೂಚಿಸಲಾಗಿದೆ.

ರಾಜ್ಯ ಸರಕಾರದ ಈ ತೀರ್ಮಾನದ ಕುರಿತು ಸಂತಸ ವ್ಯಕ್ತಪಡಿಸಿರುವ ಉಭಯ ರಾಜ್ಯಗಳ ಹಲವಾರು ನಾಗರಿಕರು, ಸರಕಾರದ ಈ ನಿರ್ಧಾರದಿಂದಾಗಿ ಕಳೆದ ಹಲವು ತಿಂಗಳುಗಳಿಂದ ಎದುರಾಗಿದ್ದ ಬಹುದೊಡ್ಡ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ ಎಂದು ತಿಳಿಸಿದ್ದಾರೆ.

ಆರ್.ಟಿ.ಪಿ.ಸಿ.ಆರ್. ವರದಿಯ ಕುರಿತಂತೆ ದಂಧೆ ನಡೆಸುವ ಬಹುದೊಡ್ಡ ಜಾಲವೇ ಕಾರ್ಯಾಚರಿಸುತ್ತಿತ್ತು. ರೂ. 200 ನೀಡಿದರೆ ಕಾಳಸಂತೆಯಲ್ಲಿ ಲಭ್ಯವಾಗುವಂತೆ ಆರ್.ಟಿ.ಪಿ.ಸಿ.ಆರ್. ವರದಿ ಮಾರಾಟವಾಗುತ್ತಿತ್ತು. ಅಲ್ಲದೆ ಸರಕಾರದ ಈ ನಿಬರ್ಂಧವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಕೆಲವರು ಇದನ್ನೇ ಪ್ರಮುಖ ದಂಧೆಯನ್ನಾಗಿ ಹಣ ಸಂಪಾದನೆಯ ಮಾರ್ಗವನ್ನಾಗಿಸಿ ಬಿಟ್ಟಿದ್ದರು. ಮಾಕುಟ್ಟ ತಪಾಸಣೆ ಗೇಟ್‍ನಲ್ಲಿ ಆರ್.ಟಿ.ಪಿ.ಸಿ.ಆರ್. ವರದಿ ಇಲ್ಲದೆ ನಿಗದಿತ ಹಣ ನೀಡಿ ಗಡಿ ಪ್ರವೇಶಿಸುತ್ತಿದ್ದವರ ಸಂಖ್ಯೆ ವ್ಯಾಪಕವಾಗಿತ್ತು. ಸರಕಾರದ ಇಂದಿನ ಈ ನಿರ್ಧಾರ ಕೆಲವರ ಹಣ ಮಾಡುವ ದಂಧೆಗಳಿಗೆ ಕಡಿವಾಣ ಹೇರಿದಂತಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ವರದಿ: ರಫೀಕ್ ತೂಚಮಕೇರಿ