ಕುಶಾಲನಗರ, ಫೆ. ೧೭: ಕುಶಾಲನಗರ ಪಟ್ಟಣವನ್ನು ಸ್ವಚ್ಛ ನಗರವನ್ನಾಗಿಸಲು ಪಟ್ಟಣ ಪಂಚಾಯಿತಿ ಮೂಲಕ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ ಸುರೇಶ್ ತಿಳಿಸಿದ್ದಾರೆ.
ಅವರು ಕುಶಾಲನಗರದ ಕೆಲವು ಭಾಗಗಳಲ್ಲಿ ಕಸ ಸುರಿಯುತ್ತಿರುವುದನ್ನು ತಪ್ಪಿಸಲು ನೂತನ ಯೋಜನೆ ಯೊಂದನ್ನು ರೂಪಿಸಿ ಆ ಪ್ರದೇಶಗಳಲ್ಲಿ ಗಿಡ ನೆಡುವ ಮೂಲಕ ಹಸಿರೀಕರಣ ಯೋಜನೆ ಹಮ್ಮಿಕೊಂಡು ಮಾತನಾಡಿ, ಕುಶಾಲನಗರ ಪಟ್ಟಣದ ಎಲ್ಲಾ ಬಡಾವಣೆಗಳನ್ನು ಸ್ವಚ್ಛ ಬಡಾವಣೆಗಳನ್ನಾಗಿಸುವ ನಿಟ್ಟಿನಲ್ಲಿ ಈಗಾಗಲೇ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಮತ್ತು ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ನೇತೃತ್ವದಲ್ಲಿ ಕಾರ್ಯ ಯೋಜನೆ ರೂಪಿಸಲಾಗಿದೆ.
ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳ ಕೊರತೆ ನಡುವೆ ಸ್ವಚ್ಛ ಕುಶಾಲನಗರ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕುಶಾಲನಗರದ ಐ.ಬಿ ರಸ್ತೆ, ಗೌಡ ಸಮಾಜ ರಸ್ತೆ, ಮಾರುಕಟ್ಟೆ ರಸ್ತೆ ಮತ್ತು ಮುಖ್ಯರಸ್ತೆಗಳಲ್ಲಿ ನಾಗರಿಕರು ಕಸದ ರಾಶಿ ಹಾಕುತ್ತಿದ್ದು ಇದನ್ನು ತಪ್ಪಿಸಲು ವಿನೂತನ ಗಿಡ ನೆಡುವ ಯೋಜನೆ ನಡೆಯುತ್ತಿದೆ ಎಂದು ಅವರು ಮಾಹಿತಿ ಒದಗಿಸಿದರು.
ಪಟ್ಟಣ ಮತ್ತು ನದಿ ಸಂರಕ್ಷಣೆ ನಿಟ್ಟಿನಲ್ಲಿ ಪಂಚಾಯಿತಿ ಮೂಲಕ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ ತಿಳಿಸಿದ್ದಾರೆ. ಪಂಚಾಯಿತಿ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಈ ಯೋಜನೆಯಲ್ಲಿ ಕೈಜೋಡಿಸುತ್ತಿದ್ದು, ಜನರಲ್ಲಿ ಜಾಗೃತಿ ಮೂಡಬೇಕಾಗಿದೆ ಎಂದರು. ನಾಗರಿಕರು ಸ್ವಚ್ಛ ಕುಶಾಲನಗರ ನಿರ್ಮಾಣದಲ್ಲಿ ಕೈಜೋಡಿಸಬೇಕೆಂದು ಕೋರಿದ್ದಾರೆ.
ಈ ಸಂದರ್ಭ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸುರಯ್ಯ ಬಾನು, ಸದಸ್ಯರಾದ ಅಮೃತರಾಜ್, ವಿ.ಎಸ್ ಆನಂದ್ ಕುಮಾರ್, ಎಂ.ಕೆ. ದಿನೇಶ್, ಎಂ.ವಿ. ನಾರಾಯಣ, ಖಲಿಮುಲ್ಲಾ, ಆರೋಗ್ಯಾಧಿಕಾರಿ ಉದಯಕುಮಾರ್ ಮತ್ತು ಸಿಬ್ಬಂದಿಗಳು ಇದ್ದರು.