ಮಡಿಕೇರಿ, ಫೆ. ೧೭: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ಚೆನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಡಾ.ಕಣವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಡಾ.ಚೆನ್ನವೀರ ಕಣವಿ ನಿಧನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ವೈವಿಧ್ಯಮಯ ಸಾಹಿತ್ಯ ಕೃಷಿಗೆ ಹೆಸರಾದ ನಾಡು ಕಂಡ ಸೃಜನ ಶೀಲ ಕವಿ ಡಾ. ಕಣವಿ ನಿಧನದಿಂದ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದರು. ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್ ಡಾ.ಕಣವಿ ಕುರಿತು ಮಾತನಾಡಿದರು.
ಪರಿಷತ್ತಿನ ಮತ್ತೋರ್ವ ಗೌರವ ಮಹಿಳಾ ಕಾರ್ಯದರ್ಶಿ ರೇವತಿ ರಮೇಶ್, ಜಿಲ್ಲಾ ಕೋಶಾಧಿಕಾರಿ ಮಂಡುವAಡ ಜೋಯಪ್ಪ, ಜಿಲ್ಲಾ ನಿರ್ದೇಶಕರಾದ ಹೆಚ್.ಎಸ್.ಪ್ರೇಮಕುಮಾರ್, ಫ್ಯಾನ್ಸಿ ಮುತ್ತಣ್ಣ, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ನವೀನ್ ಅಂಬೇಕಲ್, ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ಮೂರ್ತಿ, ಕಚೇರಿ ಸಿಬ್ಬಂದಿ ಪಲ್ಲವಿ ಇದ್ದರು.
ಕುಶಾಲನಗರದಲ್ಲಿ
ನಾಡೋಜ ಡಾ. ಚೆನ್ನವೀರಕಣವಿ ನಿಧನಕ್ಕೆ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಕುಶಾಲನಗರ ಕಸಾಪ ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ, ನಾಡು ಕಂಡ ದಿಗ್ಗಜ ಕವಿ, ವಿದ್ವಾಂಸ ಹಾಗೂ ವಿಮರ್ಶಕ ಡಾ. ಚೆನ್ನವೀರಕಣವಿ ನಿಧನದಿಂದಾಗಿ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಪಿ. ಶಶಿಧರ್ ಮಾತನಾಡಿ, ಕನ್ನಡ ಸಾಹಿತ್ಯಲೋಕ ಕಂಡ ಸೃಜನಾತ್ಮಕ ಕವಿ, ಜೀವನದುದ್ದಕ್ಕೂ ಯಾವುದೇ ವಿವಾದಗಳಿಗೆ ಸೋಂಕದ ರೀತಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು ಎಂದು ಸ್ಮರಿಸಿದರು. ಕಸಾಪ ಜಿಲ್ಲಾ ಸಮಿತಿ ನಿರ್ದೇಶಕ ಎಂ.ಇ. ಮೋಹಿದ್ದೀನ್, ಕಸಾಪ ಸದಸ್ಯ ಎಂ.ಎನ್. ಮೂರ್ತಿ, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ, ಸದಸ್ಯರಾದ ಎಂ.ವಿ. ನಾರಾಯಣ, ವಿ.ಎಸ್. ಆನಂದಕುಮಾರ್, ಬಾರವಿ ಕನ್ನಡ ಸಂಘದ ಬಬೀಂದ್ರಪ್ರಸಾದ್, ವಿಜೇಂದ್ರಪ್ರಸಾದ್, ಹೆಚ್.ಎನ್. ಸುಬ್ರಮಣ್ಯ, ಪಾಣತ್ತಲೆ ಗಿರೀಶ್, ಕಸಾಪ ಕುಶಾಲನಗರ ತಾಲೂಕು ಗೌರವ ಕಾರ್ಯದರ್ಶಿ ಮಂಜುಭಾರ್ಗವಿ, ಕೋಶಾಧಿಕಾರಿ ಉಮೇಶ್, ನಿರ್ದೇಶಕಿ ಸೂದನ ರತ್ನಾವತಿ, ನಿವೃತ್ತ ಹವಾಲ್ದಾರ್ ಜನಾರ್ಧನ್ ಮತ್ತಿತರರಿದ್ದರು.